ಕಲಬುರಗಿ: ಲಿಂಗಾಯತ ಪ್ರತ್ಯೇಕ ಧರ್ಮ ಕುರಿತಂತೆ ರಾಜ್ಯದಾದ್ಯಂತ ಪರ-ವಿರೋಧ ಕೂಗುಗಳ ನಡುವೆಯೇ ಕಲಬುರಗಿಯಲ್ಲಿ ಮಹಾರ್ಯಾಲಿ ಹಾಗೂ ಸಮಾವೇಶಗಳು ಆರಂಭಗೊಂಡಿದ್ದು, ಹೋರಾಟ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ.
ಭಾರೀ ಸಂಖ್ಯೆಯಲ್ಲಿ ಸೇರಿದ್ದ ಪ್ರಮುಖ ಲಿಂಗಾಯತ ಮಠಾಧೀಶರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೂತನವಾಗಿ ರಾಷ್ಟ್ರೀಯ ಬಸವ ಸೇನೆಗೆ ಚಾಲನೆ ನೀಡಲಾಯಿತು. ಈ ಮೂಲಕ ಬಸವ ತತ್ವ ಪ್ರಚಾರ ಹಾಗೂ ಪ್ರತ್ಯೇಕ ಧರ್ಮದ ಹೋರಾಟ ಮುಂದುವರೆಸುವ ಘೋಷ ಮೊಳಗಿದೆ.
ಸಮಾವೇಶವನ್ನು ಯಶಸ್ವಿಗೊಳಿಸಲು ಉಸ್ತುವಾರಿ ವಹಿಸಿಕೊಂಡಿರುವ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಮಾತನಾಡಿ, ವೀರಶೈವ ಪ್ರತ್ಯೇಕ ಧರ್ಮವೆಂದು ಘೋಷಿಸುವಂತೆ ಮೂರು ಬಾರಿ ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿಕೊಳ್ಳಲಾಗಿತ್ತು. ಮೂರು ಬಾರಿಯೂ ನಮ್ಮ ಮನವಿಯನ್ನು ತಿರಸ್ಕರಿಸಲಾಗಿದೆ. ವೀರಶೈವದಲ್ಲಿ ಶಿವ ಕೂಡ ಭಾಗವಾಗಿದ್ದಾನೆ. ಶಿವನು ಹಿಂದೂ ಧರ್ಮದ ಆರಾಧ್ಯ ದೈವ. ವೀರಶೈ ಹಾಗೂ ಲಿಂಗಾಯತರಿಗೆ ಪ್ರತ್ಯೇಕ ಧರ್ಮಗಳೆಂದು ಘೋಷಿಸಬೇಕೆಂದು ಹಲವು ಬಾರಿ ಕೇಂದ್ರದ ಬಳಿ ಮನವಿ ಮಾಡಿದ್ದರೂ ನಮ್ಮ ಮನವಿಯನ್ನು ತಿರಸ್ಕರಿಸಿದ್ದಾರೆಂದು ಹೇಳಿದ್ದಾರೆ.
ಲಿಂಗಾಯತ ಧರ್ಮ ರೈಲು ಇದ್ದಂತೆ. ಇದರಲ್ಲಿ 75 ಬೋಗಿಗಳಿದ್ದು, ಈ ಬೋಗಿಗಳಲ್ಲಿ ವೀರಶೈವ ಕೂಡ ಬೋದಿ ಇದ್ದಂತೆ. ಲಿಂಗಾಯತದಲ್ಲಿ 75 ಒಳಪಂಡಗಳಿದ್ದು, ವೀರಶೈವ ಕೂಡ ಒಂದಾದಿದೆ. ಎಲ್ಲಾ ಜಾತಿಗಳು ಹಾಗೂ ಉಪ ಜಾತಿಗಳು ತಮ್ಮ ವೈಯಕ್ತಿಕ ಗುರ್ತಿಕೆಗಳನ್ನು ಮರೆತು ಲಿಂಗಾಯತವನ್ನು ಪ್ರತ್ಯೇಕ ಧರ್ಮ, ಸ್ವತಂತ್ರ ಧರ್ಮವೆಂದು ಘೋಷಿಸುವಂತೆ ದನಿ ಕೂಡಿಸಬೇಕು. ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಕೇಂದ್ರ ಸರ್ಕಾರ ಬಾಗಿಲನ್ನು ತಟ್ಟಬೇಕು. ಒಂದು ವೇಳೆ ಕೇಂದ್ರ ಸರ್ಕಾರ ನಮ್ಮ ಮನವಿಯನ್ನು ತಿರಸ್ಕರಿಸಿದ್ದೇ ಆದರೆ, ಸುಪ್ರೀಂಕೋರ್ಟ್ ಮೆಟ್ಟಿಲೇರಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಚಿತ್ರದುರ್ಗದ ಬ್ರಹ್ಮ ಮಠದ ಶ್ರೀ ಮುರುಗ ರಾಜೇಂದ್ರ ಶರಣರು ಮಾತನಾಡಿ, ಲಿಂಗಾಯತರು ಹಾಗೂ ವೀರಶೈವರ ನಡುವೆ ಸೈದ್ಧಾಂತಿಕ ಭಿನ್ನತೆಗಳಿರಬಹುದು. ಆದರೆ, ಎಲ್ಲರೂ ದನಿಗೂಡಿಸುವ ಕಾಲ ಬಂದಿದೆ ಎಂದಿದ್ದಾರೆ.