ಭಾರತದ ಮಹಾಪುರಾಣ ಮಹಾಭಾರತದಲ್ಲಿ ಭೀಷ್ಮರ ವ್ಯಕ್ತಿತ್ವ ಮಹೋನ್ನತವಾದದ್ದು, ಭೀಷ್ಮ ಪಿತಾಮಹ ಮುತ್ಸದ್ದಿಯಷ್ಟೇ ಅಲ್ಲದೇ ಓರ್ವ ಅಸಾಧಾರಣ ಬಿಲ್ವಿದ್ಯಾ ಪ್ರವೀಣರೂ ಆಗಿದ್ದವರು. ಹಸ್ತಿನಾಪುರಕ್ಕಾಗಿ ತನ್ನೆಲ್ಲವನ್ನೂ ತ್ಯಾಗ ಮಾಡಿದವರು, ಶಪಥಕ್ಕೆ ಮತ್ತೊಂದು ಹೆಸರೇ ಭೀಷ್ಮ, ಆದ್ದರಿಂದಲೇ ಇಂದಿಗೂ ಶಪಥದ ಹೆಸರು ಬಂದಾಗಲೆಲ್ಲಾ ಭೀಷ್ಮ ಶಪಥ ಎಂಬ ಪದ ಬಳಕೆಯಲ್ಲಿದೆ.
ಶಂತನು ಹಾಗೂ ಗಂಗೆಯ ಪುತ್ರನಾಗಿ ಹುಟ್ಟಿದ ಭೀಷ್ಮರ ಮೂಲ ಹೆಸರು ದೇವವ್ರತ ಎಂದು. ಬಾಲ್ಯವನ್ನು ತಾಯಿಯೊಂದಿಗೆ ಕಳೆದ ದೇವವ್ರತನಿಗೆ ಭರತ ವರ್ಷದ ಋಷಿ ಶ್ರೇಷ್ಠರಾದ ವಸಿಷ್ಠರು, ದೇವತೆಗಳಿಗೆ ಗುರುವಾಗಿರುವ ಬೃಹಸ್ಪತಿ, ಶುಕ್ರಾಚಾರ್ಯ, ಪರಶುರಾಮರಿಂದ ಶಿಕ್ಷಣ ದೊರೆಯಿತು. ಶಿಕ್ಷಣ ಮುಕ್ತಾಯಗೊಳಿಸುತ್ತಿದ್ದಂತೆಯೇ, ತಾಯಿ ಗಂಗೆ ದೇವವ್ರತನನ್ನು ಮಹಾರಾಜ ಶಂತನುವಿಗೆ ಒಪ್ಪಿಸಿದಳು. ಶಂತನುವಿನ ನಂತರ ದೇವವ್ರತನೇ ಹಸ್ತಿನಾಪುರದ  ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗಿಯೂ ನಿಯೋಜಿತನಾದ. ಸ್ವತಃ ಶಂತನು ತನ್ನ ಮಗ ದೇವವ್ರತನನ್ನು ಹಸ್ತಿನಾವತಿಯ ಉತ್ತರಾಧಿಕಾರಿ ಎಂದು ಘೋಷಿಸುತ್ತಾನೆ. ಆದರೆ ವಿಧಿಯ ಆಟವೇ ಬೇರೆ ಇರುತ್ತದೆ.
ಒಮ್ಮೆ ಶಂತನು ಬೇಟೆಗೆ ತೆರಳಿದ್ದಾಗ ದೋಣಿ ಚಾಲನೆ ಮಾಡುತ್ತಿದ್ದ ಸತ್ಯವತಿ ಎಂಬ ಯುವತಿಯನ್ನು ನೋಡುತ್ತಾನೆ, ಆಕೆಯ ಸೌಂದರ್ಯಕ್ಕೆ ಆಕರ್ಷಿತನಾದ ಶಂತನು ಸತ್ಯವತಿಯನ್ನು ವಿವಾಹವಾಗಲು ಬಯಸುತ್ತಾನೆ ಅಂತೆಯೇ ಸತ್ಯವತಿಯ ತಂದೆಯನ್ನು ಭೇಟಿ ಮಾಡಿ ತನ್ನ ಇಂಗಿತವನ್ನು ತಿಳಿಸಿದ. ಆದರೆ “ತನ್ನ ಮಗಳನ್ನು ವಿವಾಹವಾಗಬೇಕಾದರೆ ಅವಳ ಮಕ್ಕಳಿಗೇ ಹಸ್ತಿನಾವತಿಯ ಸಿಂಹಾಸನ ಸಿಗಬೇಕು” ಎಂದು ಸತ್ಯವತಿಯ ತಂದೆ ಷರತ್ತು ವಿಧಿಸುತ್ತಾನೆ. ಆದರೆ ದೇವವ್ರತನನ್ನು ಅದಾಗಲೇ ಹಸ್ತಿನಾವತಿಯ ಸಿಂಹಾಸನದ ಉತ್ತರಾಧಿಕಾರಿಯನ್ನಾಗಿ ಘೋಷಿಸಿದ್ದ ರಾಜ ಶಂತನು ಸತ್ಯವತಿ ತಂದೆ ವಿಧಿಸಿದ ಷರತ್ತನ್ನು ಒಪ್ಪಲು ನಿರಾಕರಿಸುತ್ತಾನಾದರೂ ಸತ್ಯವತಿಯನ್ನು ಮರೆಯುವುದಕ್ಕೆ ಸಾಧ್ಯವಾಗದೇ ದ್ವಂದ್ವದಲ್ಲಿ ಸಿಲುಕುತ್ತಾನೆ.
ದೇವವ್ರತನಿಗೆ ಈ ಎಲ್ಲಾ ವಿಷಯಗಳೂ ತಿಳಿಯುತ್ತದೆ. ತಂದೆಯ ದ್ವಂದ್ವವನ್ನು ಹೋಗಲಾಡಿಸಲು ನಿರ್ಧರಿಸಿ ಹಸ್ತಿನಾವತಿಯ ಸಿಂಹಾಸನವನ್ನು ತಾನು ಅಧಿಷ್ಠಿಸುವುದಿಲ್ಲ, ಸತ್ಯವತಿ-ಶಂತನುವಿನ ಮಕ್ಕಳಿಗೇ ಸಿಂಹಾಸನ ಸಿಗಲಿದೆ ಎಂದು ಸತ್ಯವತಿಯ ತಂದೆಗೆ ಮನವರಿಕೆ ಮಾಡಿ ತಾನು ಆಜನ್ಮ ಬ್ರಹ್ಮಚಾರಿಯಾಗಿ ಉಳಿಯುತ್ತೇನೆಂದು ಪ್ರತಿಜ್ಞೆ ಮಾಡುತ್ತಾರೆ. ಅಷ್ಟೇ ಅಲ್ಲದೇ ಮುಂದೆ ರಾಜರಾಗುವ ಶಂತನುವಿನ ಮಕ್ಕಳಿಗೆ ತಾನು ನಿಷ್ಠನಾಗಿರುವುದಾಗಿಯೂ ಶಪಥ ಮಾಡುತ್ತಾರೆ. ದೇವವ್ರತ ಈ ರೀತಿ ಶಪಥ ಮಾಡಿದ್ದರಿಂದಲೇ ಅವರಿಗೆ ಭೀಷ್ಮ ಎಂಬ ಹೆಸರು ಬಂದಿತ್ತು, ಹಾಗಾಗಿಯೇ ಶಪಥವನ್ನು ಭೀಷ್ಮ ಪ್ರತಿಜ್ಞೆ ಎನ್ನುತ್ತಾರೆ.
RELATED ARTICLES  ಕುಮಟಾ - ಬಾಡದ ರೆಸಾರ್ಟನಲ್ಲಿ ಅಕ್ರಮ ಚಟುವಟಿಕೆ - ಪೊಲೀಸ್ ದಾಳಿ - ವೇಶ್ಯಾವಾಟಿಕೆ ನಡೆಯುತ್ತಿದ್ದ ಮಾಹಿತಿ.