ಪುತ್ತೂರು : ಸಂಸದ ನಳಿನ್ ಕುಮಾರ್ ಕಟೀಲ್, ಉಸ್ತುವಾರಿ ಸಚಿವ ವಿ ಸುನಿಲ್ ಕುಮಾರ್ ಮತ್ತು ಸಚಿವ ಅಂಗಾರ ಅವರನ್ಬು ಒಂದಿಂಚೂ ಕದಲಲು ಬಿಡದೆ, ಮಾತನಾಡಲೂ ಬಿಡದೆ ದಿಗ್ಬಂಧನ ವಿಧಿಸಿದ ಬಿಜೆಪಿ ಪಕ್ಷ, ಹಿಂದುತ್ವಪರ ಸಂಘಟನೆಯ ಕಾರ್ಯಕರ್ತರು ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು. ಕೊಲೆ ಘಟನೆ ನಿನ್ನೆ ರಾತ್ರಿ ನಡೆದಿದ್ದರೂ ಸರಕಾರದ ಪ್ರತಿನಿಧಿಗಳು ಯಾರೂ ಬಂದಿಲ್ಲ. ಈಗ ಕೊನೆ ಕ್ಷಣದಲ್ಲಿ ಯಾವ ಪುರುಷಾರ್ಥಕ್ಕೆ ಬಂದಿದ್ದೀರಿ? ನಮ್ಮ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆಕ್ರೋಶ ಹೊರಗೆಡಹಿದರು.
ನಿನ್ನೆ ರಾತ್ರಿ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ ನೆಟ್ಟಾರ ಅವರ ಅಂತಿಮ ದರ್ಶನದ ಮೇಳೆ ಕಾರ್ಯಕರ್ತರು ಬಿಜೆಪಿ ಮುಖಂಡರ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಸದ್ಯ ಬೆಳ್ಳಾರೆ ಪರಿಸರದಲ್ಲಿ ಸ್ಥಿತಿ ಬಿಗುವಿನಿಂದ ಕೂಡಿದೆ. ಪ್ರವೀಣ್ ನೆಟ್ಟಾರು ಅವರ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲು ಇಂದು, ಬುಧವಾರ ಭೇಟಿ ನೀಡಿದರು. ಪ್ರವೀಣ್ ನೆಟ್ಟಾರ್ ಅವರ ಅಂತಿಮ ದರ್ಶನಕ್ಕಾಗಿ ಬೆಳ್ಳಾರೆಗೆ ನಳಿನಕುಮಾರ ಕಟೀಲು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲಕುಮಾರ್ ಮತ್ತು ಪುತ್ತೂರು ಶಾಸಕ ಸಂಜೀವ ಮಠಂದೂರು ಒಟ್ಟಿಗೆ ಬಂದರು. ಅವರು ಕಾರಿನಿಂದ ಇಳಿಯುತ್ತಿದ್ದಂತೆಯೇ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ನಳಿನಕುಮಾರ ಮತ್ತು ಬಿಜೆಪಿಗೆ ಧಿಕ್ಕಾರ ಕೂಗಿದರು.ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಅವರಿಗೆ ಧಿಕ್ಕಾರ ಕೂಗಿದರು. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಪಕ್ಷದ ಕಾರ್ಯಕರ್ತನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಏಕೆ ಎಂದು ಖಾರವಾಗಿ ಪ್ರಶ್ನಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲು, ಸಚಿವರಾದ ಸುನೀಲ್‌ಕುಮಾರ್, ಅಂಗಾರ ಹಾಗೂ ಶಾಸಕ ಹರೀಶ್ ಪೂಂಜಾ ಅವರನ್ನು ಸುತ್ತುವರೆದು ಕಾರ್ಯಕರ್ತರು ಘೋಷಣೆ ಕೂಗಿದರು. ಕಟೀಲು ಅವರ ಕಾರನ್ನು ಕಾರ್ಯಕರ್ತರು ಮೇಲಕ್ಕೆ ಎತ್ತಿ ಮಗುಚಿ ಹಾಕಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಜನರನ್ನು ನಿಯಂತ್ರಿಸಲು ಲಾಠಿ ಬೀಸಿದ್ದಾರೆ.
ಈ ನಡುವೆ ಘಟನೆ ನಡೆದ ನಡೆದ ಬೆಳ್ಳಾರೆಯಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಪ್ರತಿಭಟನೆ ವೇಳೆ ಹಿಂದೂ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ.
ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರಿಂದ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಲಾಠಿ ಚಾರ್ಚ್ ನಿಂದಾಗಿ ಹಲವು ಕಾರ್ಯಕರ್ತರಿಗೆ ಗಾಯಗಿದ್ದು ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಸದ್ಯ ಬೆಳ್ಳಾರೆ ಪೇಟೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳದಲ್ಲಿ ಪೊಲೀಸರು ಬಿಗಿ ಭದ್ರತೆ ಹೆಚ್ಚಿಸಿದ್ದಾರೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಪಕ್ಷದ ಕಾರ್ಯಕರ್ತರ ಜೀವವನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಕರ್ನಾಟಕದ ಹಲವು ಭಾಗಗಳಲ್ಲಿ ಬಿಜೆಪಿಯ ಯುವ ಘಟಕದ ಸದಸ್ಯರು ಸಂಘಟನೆಯಿಂದ ಸಾಮೂಹಿಕ ರಾಜೀನಾಮೆಗಳನ್ನು ಪ್ರಾರಂಭಿಸಿದ್ದಾರೆ.