ಕುಮಟಾ: ಪ್ರತಿ ಶಿಕ್ಷಕರಿಗೂ ತಮ್ಮ ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಸ್ಥಾನ ಅಲಂಕರಿಸಿ, ತಾವು ಕಲಿತ ಶಾಲೆಗಳಿಗೆ ಸಹಾಯ ಹಸ್ತ ಚಾಚಲಿ ಎಂಬ ಆಶಾಭಾವನೆ ಇರುತ್ತದೆ ಎಂದು ಪೂರ್ಣಿಮಾ ಅಬ್ಬೆಮನೆ ಹೇಳಿದರು.
ಅವರು ಪಟ್ಟಣದ ಚಿತ್ರಗಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಶ್ರೀಕೃಷ್ಣ ಅಬ್ಬೆಮನೆ ದೇಣಿಗೆಯಾಗಿ ನೀಡಿದ ವಿಜ್ಞಾನ ಪ್ರಯೋಗ ಸಾಮಗ್ರಿಗಳನ್ನು ಹಸ್ತಾಂತರಿಸಿ, ಮಾತನಾಡಿದರು. ಕಳೆದ ೨೦ ವರ್ಷಗಳ ಹಿಂದೆ ಕಲಿತ ಶಾಲೆಗೆ ಶ್ರೀಕೃಷ್ಣ ಅಬ್ಬೆಮನೆ ದೇಣಿಗೆಯಾಗಿ ನೀಡಿದ ಪ್ರಯೋಗ ಸಾಮಗ್ರಿಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಚಿತ್ರಗಿ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದ ಅವರು, ಪ್ರಾಯೋಗಿಕವಾಗಿ ಕಲಿತ ವಿಷಯಗಳು ವಿದ್ಯಾರ್ಥಿಗಳಿಗೆ ಬೇಗ ಅರ್ಥವಾಗುತ್ತದೆ. ಇಂದಿನ ವಿದ್ಯಾರ್ಥಿಗಳು ಮುಂದೆ ಇಂಜಿನಿಯರ್, ಡಾಕ್ಟರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಈ ಶಾಲೆಗೆ ತಮ್ಮ ಕೈಲಾದ ಸಹಾಯ ಮಾಡಬೇಕು ಮತ್ತು ಶಿಕ್ಷಕರಿಗೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ರಾಘವೇಂದ್ರ ಭಟ್ಟ ಮಾತನಾಡಿ, ಚಿತ್ರಗಿಯ ಶಾಲೆಗೆ ವಿಜ್ಞಾನ ಪ್ರಯೋಗ ಸಾಮಗ್ರಿಗಳ ಅವಶ್ಯಕತೆ ಕುರಿತು ಈ ಶಾಲೆಯ ಹಳೆಯ ವಿದ್ಯಾರ್ಥಿ ಶ್ರೀಕೃಷ್ಣ ಅಬ್ಬೆಮನೆ ಅವರಲ್ಲಿ ಪ್ರಸ್ತಾಪಿಸಿದಾಗ ತಕ್ಷಣ ಸ್ಪಂದಿಸಿ, ಕಲಿಕೆಗೆ ಅಗತ್ಯವಾದ ಸಾಮಗ್ರಿಗಳನ್ನು ಪೂರೈಸಿದ್ದಾರೆ. ಎಲ್ಲರಲ್ಲಿಯೂ ಹಣವಿರುತ್ತದೆ. ಆದರೆ ಸಹಾಯ ಮಾಡುವ ಮನಸ್ಸು ಇರುವುದಿಲ್ಲ. ಶ್ರೀಕೃಷ್ಣ ಅಬ್ಬೆಮನೆ ವಿದ್ಯಾರ್ಥಿಗಳ ಕಲಿಕೆಯ ಹಿತದೃಷ್ಟಿಯಿಂದ ವಿಜ್ಞಾನ ಪ್ರಯೋಗ ಸಾಮಗ್ರಿಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿದ್ದಾರೆ. ಅವರ ಸೇವಾ ಮನೋಭಾವನೆ ಇತರರಿಗೆ ಮಾದರಿ ಎಂದರು.
ವಿಜ್ಞಾನ ಶಿಕ್ಷಕಿ ಗೌರಿ ಅಂಬಿಗ ಅನಿಸಿಕೆ ವ್ಯಕ್ತಪಡಿಸಿ, ಶಾಲೆಯಲ್ಲಿರುವ ವಿಜ್ಞಾನ ಪ್ರಯೋಗ ಮಾದರಿಗಳು ತುಂಬಾ ಹಳೆಯದ್ದಾಗಿದೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಸಹಾಯವಾಗುತ್ತಿಲ್ಲ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷರ ಗಮನಸೆಳೆದಾಗ ತಕ್ಷಣ ಸ್ಪಂದಿಸಿ, ಶ್ರೀಕೃಷ್ಣ ಅಬ್ಬೆಮನೆ ಅವರನ್ನು ಸಂಪರ್ಕಿಸಿ, ನೂತನ ಪ್ರಯೋಗ ಮಾದರಿಗಳನ್ನು ಒದಗಿಸಿದ್ದಾರೆ. ಸಹಾಯಕ ಮಾಡಿದ ಇಬ್ಬರು ಗಣ್ಯರಿಗೂ ವಿಜ್ಞಾನ ಶಿಕ್ಷಕಿಯಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ.ಸಿ ವತಿಯಿಂದ ಪೂರ್ಣಿಮಾ ಅಬ್ಬೆಮನೆ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಶತಮಾನೋತ್ಸವ ಆಚರಣಾ ಸಮಿತಿಯ ಆರ್ಥಿಕ ಸಮಿತಿ ಅಧ್ಯಕ್ಷ ಗಣೇಶ ಭಟ್ಟ, ಎಸ್.ಡಿ.ಎಂ.ಸಿ ಸದಸ್ಯರಾದ ಲಕ್ಷ್ಮೀಕಾಂತ ಪಟಗಾರ, ದೀಪಾ ಕೊಡಿಯಾ, ಮಹೇಶ ಕೋಮಾರಪಂತ, ಶಿಕ್ಷಕರಾದ ಮಾಲತಿ ನಾಯ್ಕ, ಸಂಧ್ಯಾ ಭಟ್ಟ ಸೇರಿದಂತೆ ಮತ್ತಿತರರು ಇದ್ದರು ಶಿಕ್ಷಕರಾದ ಸುಜಾತಾ ನಾಯ್ಕ ನಿರೂಪಿಸಿದರು. ಪಿ.ಟಿ.ಪಟಗಾರ ವಂದಿಸಿದರು.