ಕುಮಟಾ: ತಾಲೂಕಿನ ಮೂರೂರು ಪ್ರಗತಿ ವಿದ್ಯಾಲಯದಲ್ಲಿ 2022 .23 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಅಭಿಪ್ರೇರಣಾ ಕಾರ್ಯಕ್ರಮ ದಿನಾಂಕ 27 / 07 / 2022 ರಂದು ನಡೆಯಿತು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಶೃಂಗೇರಿಯ ಎನ್.ಸಿ.ಪಾಂಡುರಂಗ ಹಾಗೂ ಶ್ರೀಮತಿ ಸುಲತಾ ಭಟ್ಟ ಆಗಮಿಸಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ವಿಧಾನದ ಮೂಲಕ ಅಭಿಪ್ರೇರಣೆ ನೀಡಿದರು.
ತರಗತಿ ನಿರ್ವಹಣೆ ಕುರಿತಂತೆ ಓದುವ ಹವ್ಯಾಸ ರೂಢಿಸುವುದು. ಓದುವುದು ನನ್ನ ಜವಾಬ್ಧಾರಿ, ನನ್ನ ಸ್ವಾತಂತ್ರ್ಯ, ನನ್ನ ಆಯ್ಕೆ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟು ಕಲಿಕಾ ಸಾಮರ್ಥ್ಯ ಹೆಚ್ಚಿಸುವತ್ತ ಪ್ರೇರೇಪಿಸಿದರು. ಗಣಿತದ ಸಮಸ್ಯೆಗೆ ಉತ್ತರ ಕಂಡುಹಿಡಿಯುವ ಸುಲಭದ ವಿಧಾನ, ನೆನಪಿನ ಶಕ್ತಿ ವೃದ್ಧಿಸುವ ಮಾರ್ಗೋಪಾಯಗಳನ್ನು, ಕಲಿಕೆಯ ಸಂದರ್ಭದಲ್ಲಿ ಎದುರಾಗುವ ವಿವಿಧ ಸಮಸ್ಯೆಗಳಿಗೆ, ಸವಾಲುಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅನೇಕ ತಂತ್ರಗಳನ್ನು ತಿಳಿಸಿಕೊಟ್ಟರು.
ವಿದ್ಯಾರ್ಥಿಗಳು ಆಸಕ್ತಿಯಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಲಿಕೆಗೆ ಪೂರಕವಾಗಿ ಹೊಸ ಹೊಸ ಕೌಶಲ್ಯವನ್ನು ರೂಢಿಸಿಕೊಂಡರು. ಕಾರ್ಯಕ್ರಮದಲ್ಲಿ ಪ್ರಗತಿ ವಿದ್ಯಾಲಯದ ಕನ್ನಡ ಮಾಧ್ಯಮ ಹಾಗೂ ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಎರಡೂ ವಿಭಾಗದ ಮುಖ್ಯಾಧ್ಯಾಪಕರು, ವಿದ್ಯಾರ್ಥಿ ಪರಿಷದ್ ಮುಖ್ಯಸ್ಥರು, ಶಾಲಾ ಆಡಳಿತಾಧಿಕಾರಿಗಳಾದ ಶ್ರೀ ಜಿ.ಎಂ.ಭಟ್ಟ. ಶಾಲಾ ಶಿಕ್ಷಕ ವೃಂದ ಪಾಲ್ಗೊಂಡರು. ಶಿಕ್ಷಕ ಜಿ.ಆರ್.ನಾಯ್ಕ ಸ್ವಾಗತಿಸಿದರು. ಶಿಕ್ಷಕ ಮನೋಹರ ನಾಯ್ಕ ವಂದಿಸಿದರು.