ಗೋಕರ್ಣ: ದಕ್ಷಿಣ ಕನ್ನಡ ಜಿಲ್ಲೆ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆ ಘಟನೆಯನ್ನು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ತೀವ್ರವಾಗಿ ಖಂಡಿಸಿದ್ದಾರೆ. ಯುವ ನಾಯಕನನ್ನು ಮಾರಕಾಸ್ತ್ರಗಳಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿರುವ ಹೇಯ ಕೃತ್ಯ ಎಲ್ಲರೂ ತಲೆ ತಗ್ಗಿಸುವ ವಿಚಾರ. ಸರ್ಕಾರ ತಕ್ಷಣ ಆರೋಪಿಗಳನ್ನು ಬಂಧಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಪ್ರವೀಣ್ ಸದಾ ಶ್ರೀಮಠದ ಜತೆ ಉತ್ತಮ ಸಂಪರ್ಕ ಹೊಂದಿದ್ದು, ಆಗಾಗ್ಗೆ ಶ್ರೀಮಠಕ್ಕೆ ಭೇಟಿ ನೀಡಿ ಸಾಮಾಜಿಕ ವಿಷಯಗಳ ಬಗ್ಗೆ ಮಾರ್ಗದರ್ಶನ ಪಡೆಯುತ್ತಿದ್ದ. ಆತನ ಕುಟುಂಬದ ಜತೆ ಶ್ರೀಮಠ ಸದಾ ಇರುತ್ತದೆ ಎಂದು ಅಭಯ ನೀಡಿದ್ದಾರೆ.
ಪ್ರವೀಣ್ ಸಾವು ಸಮಾಜಕ್ಕೆ ತುಂಬಲಾರದ ನಷ್ಟ. ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ವಿಧಿಸಬೇಕು. ಮುಂದೆ ಇಂಥ ಘಟನೆಗಳು ನಡೆಯದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಜನ ಶಾಂತಿಪ್ರಿಯರು. ಜನ ಆವೇಶಕ್ಕೆ ಒಳಗಾಗದೇ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು. ನ್ಯಾಯಕ್ಕಾಗಿ ನಡೆಸುವ ಹೋರಾಟ ಶಾಂತಿಯುತವಾಗಿರಲಿ ಎಂದು ಸ್ವಾಮೀಜಿ ಕಿವಿಮಾತು ಹೇಳಿದ್ದಾರೆ.