ನ್ಯೂಯಾರ್ಕ್: ನಕಲಿ ಫೋಟೋ ತೋರಿಸುವ ಮೂಲಕ ಕಾಶ್ಮೀರ ವಿಚಾರವಾಗಿ ಭಾರತವನ್ನು ಕೆಟ್ಟದಾಗಿ ಬಿಂಬಿಸುವ ಪಾಕಿಸ್ತಾನದ ಪ್ರಯತ್ನವನ್ನು ಇದೀಗ ವಿಶ್ವಸಂಸ್ಥೆಯಲ್ಲಿ ಭಾರತ ಬಟಾ ಬಯಲು ಮಾಡಿದೆ.
ಪಾಕಿಸ್ತಾನದ ವಿಶ್ವಸಂಸ್ಥೆ ಪ್ರತಿನಿಧಿ ಮಲೀಹಾ ಲೋಧಿ ಅವರು ಈ ಹಿಂದಿನ ಸಭೆ ವೇಳೆ ಕಾಶ್ಮೀರದಲ್ಲಿ ಭಾರತ ಹಿಂಸೆ ನಡೆಸುತ್ತಿದೆ ಎಂದು ತೋರಿಸಿದ್ದ ಫೋಟೋ 2014 ರಲ್ಲಿ ಇಸ್ರೇಲ್ ನ ವೈಮಾನಿಕ ದಾಳಿಯಲ್ಲಿ ಗಾಯಗೊಂಡ ಪ್ಯಾಲೆಸ್ಟೇನ್ ನ 17 ವರ್ಷದ ಬಾಲಕಿಯ ಫೋಟೊ ಆಗಿತ್ತು. ಇದೀಗ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಭಾರತ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ನಕಲಿ ಸಾಕ್ಷ್ಯಾಧಾರಗಳ ಸೃಷ್ಟಿ ಮೂಲಕ ಪಾಕಿಸ್ತಾನ ಕಾಶ್ಮೀರ ವಿಚಾರವಾಗಿ ವಿಶ್ವ ಸಮುದಾಯಕ್ಕೆ ಭಾರತವನ್ನು ಕೆಟ್ಟದಾಗಿ ಬಿಂಬಿಸುವ ಪ್ರಯತ್ನ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಭಾರತದ ವಿಶ್ವಸಂಸ್ಥೆಯ ಪ್ರತಿನಿಧಿ ಪಲೋಮಿ ತ್ರಿಪಾಠಿ ಅವರು, ಪಾಕಿಸ್ತಾನ ಸುಳ್ಳು ಫೋಟೋ ತೋರಿಸುವ ಮೂಲಕ ಇಡೀ ವಿಶ್ವಸಂಸ್ಥೆ ಸದನವನ್ನು ತಪ್ಪುದಾರಿಗೆ ಎಳೆದಿದೆ. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಪ್ರಾಯೋಜಿತ ಉಗ್ರತ್ವದ ಬಗ್ಗೆ ಚರ್ಚೆಯಾಗುತ್ತಿದ್ದ ಸಂದರ್ಭದಲ್ಲಿ ಇಡೀ ಸದನದ ಗಮನ ಬೇರೆಡೆ ಸೆಳೆಯಲು ಈ ನಕಲಿ ಫೋಟೋವನ್ನು ಬಳಕೆ ಮಾಡಿಕೊಂಡಿದ್ದಾರೆ. ಪಾಕಿಸ್ತಾನದ ಪ್ರತಿನಿಧಿ ಲೋಧಿ ತೋರಿಸಿದ ಫೋಟೋ 2014ರ ಜುಲೈ 22ರಂದು ಅಮೆರಿಕ ಮೂಲದ ಛಾಯಾಗ್ರಾಹಕ ಹೈಡಿಲಿವೈನ್ ಅವರು ಗಾಜಾಪಟ್ಟಿಯಲ್ಲಿ ತೆಗೆದಿದ್ದು, ಅಂದು ಇಸ್ರೇಲಿ ಪಡೆಗಳ ದಾಳಿಯಲ್ಲಿ 17 ವರ್ಷದ ಪ್ಯಾಲೆಸ್ಟೇನ್ ನ ರಾವಿ ಅಬು ಜೊಮಾ’ಎ ಗಾಯಗೊಂಡಿದ್ದ ಫೋಟೋವನ್ನು ಸೆರೆ ಹಿಡಿದಿದ್ದರು. ಈ ಫೋಟೋವನ್ನು ತೋರಿಸುವ ಮೂಲಕ ಪಾಕಿಸ್ತಾನಕ್ಕೆ ಭಾರತದ ಮೇಲಿರುವ ಹತಾಶೆ ಮತ್ತು ದ್ವೇಷವನ್ನು ಬಹಿರಂಗವಾಗಿ ಬಿಂಬಿತವಾಗುತ್ತಿದೆ ಎಂದು ಹೇಳಿದರು.ಇದೇ ವೇಳೆ ಕಾಶ್ಮೀರದಲ್ಲಿ ಹತ್ಯೆಗೀಡಾದ ಜಮ್ಮು ಮತ್ತು ಕಾಶ್ಮೀರದ 2 ರಜಪೂತನ್ ರೈಫಲ್ ವಿಭಾಗದ ಯೋಧ ಅಧಿಕಾರಿ ಲೆಫ್ಟಿನೆಂಟ್ ಉಮರ್ ಫಯಾಜ್ ಅವರ ಪಾರ್ಥೀವ ಶರೀರದ ಫೋಟೋ ತೋರಿಸಿದ ಪಲೋಮಿ ತ್ರಿಪಾಠಿ ಅವರು, ಕಾಶ್ಮೀರದಲ್ಲಿ ಪಾಕಿಸ್ತಾನ ನಡೆಸುತ್ತಿರುವ ದುಷ್ಕೃತ್ಯಕ್ಕೆ ಸಾಕ್ಷಿ ಇದು ಎಂದು ಹೇಳಿದರು.
ಅಂತೆಯೇ ಇದು ನಕಲಿ ಫೋಟೋವಲ್ಲ ಅಸಲಿಯಾಗಿದ್ದು, ಕಾಶ್ಮೀರದಲ್ಲಿ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 22 ವರ್ಷದ ಯುವ ಅಧಿಕಾರಿಯನ್ನು 2017ರ ಮೇ ತಿಂಗಳಲ್ಲಿ ಅಪಹರಣ ಮಾಡಿದ್ದ ಪಾಕಿಸ್ತಾನ ಬೆಂಬಲಿತ ಉಗ್ರ ಸಂಘಟನೆಗಳು ಆತನಿಗೆ ತೀವ್ರವಾಗಿ ಹಿಂಸೆ ನೀಡಿ ಕೊಲೆ ಮಾಡಿದ್ದವು ಎಂದು ಹೇಳಿದರು.