ಕಾರವಾರ: ನವರಾತ್ರಿ ಸಂಭ್ರಮಕ್ಕೆ ಗುಜರಾತಿಗಳ ‘ದಾಂಡಿಯಾ’ ನೃತ್ಯವು ವಿಶೇಷ ಮೆರುಗು ತಂದಿದೆ. ನಗರದ ದುರ್ಗಾದೇವಿ ದೇವಸ್ಥಾನಗಳ ಆವರಣವು ರಾತ್ರಿ 9ರ ನಂತರ ಕಳೆಗಟ್ಟುತ್ತಿದ್ದು, ಕಿರಿಯರು, ಹಿರಿಯರು ಎಂಬ ಭೇದಭಾವವಿಲ್ಲದೇ ಒಂದೆಡೆ ಕಲೆತು ವಿವಿಧ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಇಲ್ಲಿನ ಹಬ್ಬುವಾಡದ ಕುಂಠಿ ಮಹಾಮಾಯಿ ದೇವಸ್ಥಾನ, ನಂದನ ಗದ್ದಾದ ಗಿಂಡಿವಾಡ ದೇವಸ್ಥಾನ, ಕೋಟೇಶ್ವರ ದೇವಸ್ಥಾನ, ದೇವಳಿವಾಡದ ದುರ್ಗಾದೇವಿ ದೇವಸ್ಥಾನ, ಸೋನಾರವಾಡದ ಶಿವನಾಥ ದೇವಸ್ಥಾನ, ನ್ಯೂಕೆಚ್‌ಬಿ ಕಾಲೊನಿ, ಬಾಂಡಿಶಿಟ್ಟಾ, ಕಳಸವಾಡ ಹೀಗೆ ಹಲವೆಡೆ ದಾಂಡಿಯಾ ನೃತ್ಯ ಮೇಳೈಸಿದೆ.
ದಾಂಡಿಯಾ ನಡೆಯುವ ಸ್ಥಳವನ್ನು ಸ್ವಚ್ಛಗೊಳಿಸಿ, ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ಸುತ್ತಲೂ ಹಗ್ಗ ಕಟ್ಟಿ, ಜನರು ನಿಂತು ನೋಡುವಂತೆ ಅವಕಾಶ ಕಲ್ಪಿಸಲಾಗಿದೆ. ಕೆಲವೆಡೆ ದುರ್ಗಾದೇವಿಯ ಭಾವಚಿತ್ರ ಇಟ್ಟು ಪೂಜಿಸಿದರೆ, ಇನ್ನು ಕೆಲವೆಡೆ ದುರ್ಗಾದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
ಆರಂಭದಲ್ಲಿ 15 ನಿಮಿಷಗಳು ಗರ್ಬಾ ನೃತ್ಯ ನಡೆದ ನಂತರ ದಾಂಡಿಯಾ ಆರಂಭವಾಗುತ್ತದೆ. ಧ್ವನಿವರ್ಧಕದಿಂದ ಹೊರಹೊಮ್ಮುವ ಹಾಡಿಗೆ ಕೋಲಾಟ ಆಡುತ್ತಾ ಹೆಜ್ಜೆಹಾಕುತ್ತಿದ್ದಾರೆ. ಪುಟಾಣಿಗಳು ಸಹ ನೃತ್ಯ ಮಾಡುವುದು ವಿಶೇಷ. ಒಂದು ತಾಸಿನ ನೃತ್ಯದ ನಂತರ 10 ನಿಮಿಷ ವಿಶ್ರಾಂತಿ ನೀಡಲಾಗುತ್ತದೆ. ಬಳಿಕ ಮತ್ತೆ ಮುಂದುವರಿಯುತ್ತದೆ. ಹೀಗೆ ಮಧ್ಯರಾತ್ರಿ 1 ಗಂಟೆವರೆಗೂ ನಡೆಯುತ್ತದೆ.
ಏನಿದು ದಾಂಡಿಯಾ?: ದಾಂಡಿಯಾ ಎಂಬುದು ಗುಜರಾತಿಗಳ ನೃತ್ಯ ಪ್ರಕಾರವಾಗಿದ್ದು, ನವರಾತ್ರಿಯಲ್ಲಿ ಎಲ್ಲರೂ ಒಂದೆಡೆ ಸೇರಿ ಕೋಲು ಹಿಡಿದು ನೃತ್ಯ ಮಾಡುತ್ತಾರೆ. ರಂಗು ರಂಗಿನ ಉಡುಪು ತೊಟ್ಟ ಮಹಿಳೆಯರು, ಪುರುಷರು ಹಾಗೂ ಮಕ್ಕಳು ವೃತ್ತಾಕಾರದಲ್ಲಿ ನಿಂತು ನೃತ್ಯ ಮಾಡುತ್ತಾ ಭಕ್ತಿಪರವಶರಾಗುತ್ತಾರೆ.
‘ಬಟ್ಟೆ ವ್ಯಾಪಾರಕ್ಕಾಗಿ ಬಂದ ನೂರಾರು ಗುಜರಾತಿಗಳು ನಗರದ ನಾನಾ ಭಾಗಗಳಲ್ಲಿ ನೆಲೆಸಿದ್ದಾರೆ. ಆರಂಭದಲ್ಲಿ ಗುಜರಾತಿ ಸಮುದಾಯದವರು ಮಾತ್ರ ಈ ನೃತ್ಯ ಮಾಡುತ್ತಿದ್ದರು. ಕಾಲಾನಂತರದಲ್ಲಿ ಸ್ಥಳೀಯ ಜನರು ಇದಕ್ಕೆ ಮಾರುಹೋಗಿ, ಅವರು ಇದನ್ನು ಸಂಪ್ರದಾಯದಂತೆ ಮುಂದುವರಿಸಿಕೊಂಡು ಬಂದಿದ್ದಾರೆ. ಒಂಬತ್ತು ದಿನಗಳು ಇದು ಭರಪೂರ ಮನರಂಜನೆ ನೀಡುತ್ತದೆ’ ಎನ್ನುತ್ತಾರೆ ಸೋನಾರವಾಡದ ಸುಶ್ಮಿತಾ ರೇವಣಕರ್.
10ನೇ ದಿನಕ್ಕೆ ವಿಸರ್ಜನೆ: ‘ಇದೇ 22ರಿಂದ ದಾಂಡಿಯಾ ನೃತ್ಯ ಆರಂಭಗೊಂಡಿದ್ದು, 30ಕ್ಕೆ ಮುಕ್ತಾಯವಾಗುತ್ತದೆ. ದಿನದಿಂದ ದಿನಕ್ಕೆ ನೃತ್ಯ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸೋನಾರವಾಡದಲ್ಲಿ ಐದು ಅಡಿ ಎತ್ತರದ ದುರ್ಗಾದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, 10ನೇ ದಿನಕ್ಕೆ ಸಮುದ್ರದಲ್ಲಿ ವಿಸರ್ಜಿಸಲಾಗುತ್ತದೆ’ ಎಂದು ಸೋನಾರವಾಡದ ನವರಾತ್ರಿ ಉತ್ಸವ ಸಮಿತಿ ಕಾರ್ಯದರ್ಶಿ ಶ್ರೀಕಾಂತ ವೆರ್ಣೇಕರ ‘ಪ್ರಜಾವಾಣಿ’ಗೆ ತಿಳಿಸಿದರು.