ಭಟ್ಕಳ: ಭಟ್ಕಳದಲ್ಲಿ ಮೇಘಸ್ಪೋಟವಾಗಿ ನಾಲ್ವರನ್ನು ಬಲಿಪಡೆದಿದೆ. ಒಂದೇ ದಿನ ಸುರಿದ ಮಳೆಯಿಂದಾಗಿ ಮನೆಯ ಮೇಲೆ ಗುಡ್ಡ ಕುಸಿದ ಪರಿಣಾಮ ನಾಲ್ವರು ಕೊನೆಯುಸಿರೆಳೆದಿದ್ದಾರೆ. ಜೊತೆಗೆ ಹೆಚ್ಚು ಮಳೆಯ ಕಾರಣ ಶಿರಾಲಿ, ಕಾಯ್ಕಿಣಿ, ಮುಂಡಳ್ಳಿ, ಮುಟ್ಟಳ್ಳಿ, ಬೆಂಗ್ರೆ ಹಾಗೂ ಮತ್ತಿತರ ಜಲಾವೃತ ಗ್ರಾಮಗಳಲ್ಲಿನ ಜನರನ್ನು ಅಗ್ನಿಶಾಮಕ ಇಲಾಖೆ, SDRF ತಂಡ, ಪೊಲೀಸ್ ಹಾಗೂ ಜಿಲ್ಲಾಡಳಿತದ ವತಿಯಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ. ಭಟ್ಕಳದ ಚೌಥನಿ ನದಿ ಉಕ್ಕಿ ಹರಿಯುತ್ತಿದ್ದು ತಾಲೂಕಿನ ಬಹುತೇಕ ಮನೆಗಳು ನೀರಿನಿಂದ ಜಲಾವೃತಗೊಂಡಿತ್ತು.
ಮೂಡಭಟ್ಕಳ ಬೈಪಾಸನಿಂದ ಮುಟ್ಟಳ್ಳಿಗೆ ಸಂಪರ್ಕಿಸುವ ರಸ್ತೆ ನೀರಿನಿಂದ ಸಂಪೂರ್ಣ ಜಲಾವೃತಗೊಂಡಿದ್ದು, ಅಲ್ಲಿನ ನಿವಾಸಿಗಳು ಮನೆಯಲ್ಲಿಸಿಲುಕಿ ಕೊಂಡಿದ್ದಾರೆ. ಮಣ್ಕುಳಿ, ಚೌಥನಿ, ಮುಂಡಳ್ಳಿ, ಮುಟ್ಟಳ್ಳಿ, ಮೂಡಭಟ್ಕಳ ಬೈಪಾಸ್ ಸೇರಿದಂತೆ ಅನೇಕ ಗ್ರಾಮಗಳು ಮುಳುಗಡೆಯಾಗಿದೆ. ಈ ಹಿನ್ನೆಲೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸಾರ್ವಜನಿಕ ಅನೇಕ ಕಡೆಗಳಲ್ಲಿ ಮನೆಯಲ್ಲಿ ಸುಲಿಕಿಕೊಂಡಿರುವವರನ್ನು ರಕ್ಷಣೆ ಮಾಡಲಾಗಿದೆ.
ಮಣ್ಕುಳಿಯಿಂದ ಮೂಢ ಭಟ್ಕಳ ಬೈಪಾಸಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ಹರಿದು ಹೋಗುತ್ತಿರುವ ಹಿನ್ನೆಲೆ ಸಂಪರ್ಕ ಕಡಿತಗೊಂಡಿತ್ತು. ಭಾರಿ ಮಳೆಯಿಂದ ಭಟ್ಕಳದ ಅನೇಕ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದೆ ಪ್ರಸ್ತುತ ಶಿರಾಲಿ ಚಂಡಮಾರುತ ಆಶ‍್ರಯತಾಣ ಹಾಗೂ ಪುರವರ್ಗ ಶಾಲೆಯಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ ಎನ್ನಲಾಗಿದೆ.
ಸಾರ್ವಜನಿಕರು ಯಾವುದೇ ದೂರುಗಳಿದ್ದಲ್ಲಿ ಭಟ್ಕಳ ತಾಲೂಕಾ ಕಂಟ್ರೋಲ್ ರೂಂ ನಂ. 08385-226422 ಹಾಗೂ ಜಿಲ್ಲಾ ಕಂಟ್ರೋಲ್ ರೂಂ. 1077/ 08382-229857 ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ ಎಂದು ವರದಿಯಾಗಿದೆ.