ಕುಮಟಾ : ಜಾತುರ್ಮಾಸ್ಯ ವೃತಾಚರಣೆಯಲ್ಲಿ ನಿರತರಾದ ಕನ್ಯಾಡಿಯ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ಕುಮಟಾ ತಾಲೂಕು ಆರ್ಯ ಈಡಿಗ ನಾಮಧಾರಿ ಸಂಘದಿAದ ಹೊರೆಗಾಣಿಕೆ ಸಲ್ಲಿಸಿ, ಶ್ರೀಗಳ ಪಾದ ಪೂಜೆ ನೆರವೇರಿಸಲಾಯಿತು.
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದರ್ಶನ ಪಡೆದ ಕುಮಟಾದ ನಾಮಧಾರಿ ಸಮಾಜದ ಬಾಂಧವರು ಶ್ರೀಗಳಿಂದ ಆಶೀರ್ವಾದ ಪಡೆದರು. ಬಾಡ, ಅಘನಾಶಿನಿ ಭಾಗದ ಭಕ್ತರು ಭಜನಾ ಕಾರ್ಯಕ್ರಮ ನಡೆಸುವ ಮೂಲಕ ಗುರುಗಳಿಗೆ ಭಕ್ತಿ ಸಮರ್ಪಣೆ ಗೈದರು. ಶ್ರೀಗಳ ಪಾದ ಪೂಜೆಯನ್ನು ಕುಮಟಾ ತಾಲೂಕು ಆರ್ಯ ಈಡಿಗ ನಾಮಧಾರಿ ಸಂಘದ ಅಧ್ಯಕ್ಷರಾದ ಮಂಜುನಾಥ ನಾಯ್ಕ ಕೋಡ್ಕಣಿ ದಂಪತಿ ನೆರವೇರಿಸಿದರು. ಸಮಾಜದ ಪ್ರಮುಖರು ಗುರುಗಳಿಗೆ ತುಳಸಿ ಮಾಲೆ ಅರ್ಪಿಸಿದರು. ಸಮಾಜಬಾಂಧವರೆಲ್ಲ ಶ್ರೀಗಳಿಗೆ ವಿಶೇಷ ಪೂಜಾ ಸೇವೆ ಗೈದರು. ಶ್ರೀಗಳು ಭಕ್ತರಿಗೆ ಮಂತ್ರಾಕ್ಷತೆ ನೀಡಿ ಎಲ್ಲರನ್ನು ಹರಸಿದರು.
ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ಈ ಬಾರಿಯ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಕುಮಟಾ ತಾಲೂಕಿನಿಂದ ೩೦೦ಕ್ಕೂ ಅಧಿಕ ಸಂಖ್ಯೆಯಲ್ಲಿ ನಾಮಧಾರಿ ಸಮಾಜದವರು ಆಗಮಿಸಿರುವುದು ಖುಷಿಯ ಸಂಗತಿ. ಗುರು ಸೇವೆ ಮಾಡಿದರೆ, ನೆಮ್ಮದಿ ಪ್ರಾಪ್ತಿಯಾಗುತ್ತದೆ. ಆಧ್ಯಾತ್ಮಿಕತೆಯ ಪರಿಚಯವಾಗುತ್ತದೆ. ಜೀವನದಲ್ಲಿ ಉತ್ತಮ ಸಂಸ್ಕಾರವನ್ನು ಅಳವಡಿಸಿಕೊಂಡರೆ, ಮಾನಸಿಕ ನೆಮ್ಮದಿಯ ಜೊತೆಗೆ ಸಮಾಜಕ್ಕೂ ಒಳಿತಾಗುತ್ತದೆ. ಜೀವನದಲ್ಲಿ ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಂಡರೆ ಅಪರಾಧ ಕೃತ್ಯಗಳು ಸಮಾಜದಿಂದಲೇ ದೂರವಾಗುತ್ತದೆ. ಪರಿಸ್ಪರ ಸ್ನೇಹ, ವಿಶ್ವಾಸ ಮೂಡುತ್ತದೆ. ಹಾಗಾಗಿ ಪ್ರತಿಯೊಬ್ಬರು ಗುರು ಸೇವೆಯ ಮೂಲಕ ಆಧ್ಯಾತ್ಯಿಕತೆಯ ಕಡೆಗೆ ಒಲವು ತೋರಬೇಕೆಂದು ಕರೆ ನೀಡಿದರು.
ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು. ಭಕ್ತರು ಪ್ರಸಾದ ಸ್ವೀಕರಿಸಿ ಧನ್ಯರಾದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್ಯ ಈಡಿಗ ನಾಮಧಾರಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಎಲ್ ನಾಯ್ಕ, ಸಮಾಜದ ಪ್ರಮುಖರಾದ ಆರ್ ಜಿ ನಾಯ್ಕ, ಎಚ್ ಆರ್ ನಾಯ್ಕ ಕೋನಳ್ಳಿ, ಮಾಜಿ ಅಧ್ಯಕ್ಷ ಸುಬ್ರಾಯ ನಾಯ್ಕ, ಸೂರಜ ನಾಯ್ಕ ಸೋನಿ, ರತ್ನಾಕರ ನಾಯ್ಕ, ಪ್ರಶಾಂತ ನಾಯ್ಕ, ಗಜು ನಾಯ್ಕ ಅಳ್ವೆಕೋಡಿ, ಕುಮಟಾ ಪುರಸಭೆ ಸದಸ್ಯ ಸಂತೋಷ ನಾಯ್ಕ, ಮುಖಂಡರಾದ ಸಂತೋಷ ನಾಯ್ಕ ಮೂರೂರ , ರಾಘವೇಂದ್ರ ನಾಯ್ಕ ಮೂರೂರು, ಅಣ್ಣಪ್ಪ ನಾಯ್ಕ, ಕಮಲಾಕರ ನಾಯ್ಕ, ವಿಶ್ವನಾಥ ನಾಯ್ಕ, ನವೀನ ನಾಯ್ಕ, ಸರ್ವೇಶ್ವರ ನಾಯ್ಕ, ಗಂಗಾಧರ ನಾಯ್ಕ ಹಿರೇಗುತ್ತಿ, ಗುರುನಂದನ ಬಾಡ, ರಮೇಶ ನಾಯ್ಕ ಅಘನಾಶಿನಿ, ದತ್ತು ನಾಯ್ಕ ಇತರರು ಉಪಸ್ಥಿತರಿದ್ದರು.