ಹೊನ್ನಾವರ: ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ, ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಇನ್ನಿಲ್ಲದ ಅವಾಂತರ ಸೃಷ್ಟಿಸಿ ಹಲವೆಡೆಗಳಲ್ಲಿ ಜನ-ಜಾನುವಾರುಗಳ ಸ್ಥಿತಿ ಚಿಂತಾಜನಕವಾಗಿತ್ತು. ಕರುಣೆಯಿಲ್ಲದ ವರುಣ ಭಟ್ಕಳದಲ್ಲೂ ಅಬ್ಬರಿಸಿ ನಾಲ್ಕು ಜನರ ಜೀವವನ್ನು ಬಲಿ ತೆಗೆದುಕೊಂಡು ದೊಡ್ಡ ಅವಾಂತರ ಸೃಷ್ಟಿಸಿದ್ದ. ಆದರೆ ಮತ್ತೆ ಕಳೆದೆರಡು ದಿನಗಳಿಂದ ವರುಣ ಅಬ್ಬರಿಸುತ್ತಿದ್ದು ಮನೆಗಳೂ ಹಾನಿಗೀಡಾಗಿವೆ.
ತಾಲೂಕಿನ ಮಂಕಿ ಅನಂತವಾಡಿ ಗ್ರಾಂ ಪಂ ವ್ಯಾಪ್ತಿಯ ಹೆರಾಳಿ ಗ್ರಾಮದ ಅಣ್ಣಪ್ಪ ಕುಪ್ಪ ನಾಯ್ಕ ಅವರ ವಾಸಿಸುವ ಮನೆ ಭಾರಿ ಮಳೆಯ ಕಾರಣದಿಂದ ಮುರಿದುಬಿದ್ದಿದ್ದು, ಲಕ್ಷಾಂತರ ರೂ. ಹಾನಿಯಾದ ಬಗ್ಗೆ ವರದಿಯಾಗಿದೆ. ಜಿಲ್ಲೆಯಲ್ಲಿ ಮತ್ತೆ ವರುಣನ ಆರ್ಭಟ ಮುಂದುವರಿಯುವ ಸಾಧ್ಯತೆ ದಟ್ಟವಾಗಿದ್ದು, ಮತ್ತೆ ಜನರಲ್ಲಿ ಆತಂಕವನ್ನುಂಟುಮಾಡಿದೆ.