ಕಾರವಾರ ಉತ್ತರ ಕನ್ನಡದಲ್ಲಿ ಅತ್ಯಂತ ತೀವ್ರ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಕಳೆದ ಕೆಲ ದಿನಗಳಿಂದ ಬೀಸುತ್ತಿರುವ ಗಾಳಿ ಮಳೆ ಮೀನುಗಾರಿಕೆಯ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಮೀನುಗಾರಿಕೆಯ ಮೇಲೆ ಉಂಟಾದ ವ್ಯತಿರಿಕ್ತ ಪರಿಣಾಮದಿಂದಾಗಿ, ಸಾಂಪ್ರದಾಯಿಕ ಮೀನುಗಾರಿಕೆಗೆ ಪೆಟ್ಟು ಬಿದ್ದಿದ್ದು ಮೀನುಗಾರಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಜಿಲ್ಲೆಯ ಹಲವಡೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ದೋಣಿಗಳು ಸಹ ಲಂಗರು ತುಂಡಾಗಿ ಸಮುದ್ರ ಸೇರಿದ್ದರಿಂದ ಈ ಬಾರಿಯ ಸಾಂಪ್ರದಾಯಿಕ ಮೀನುಗಾರಿಕೆ ಸಂಪೂರ್ಣವಾಗಿ ನೆಲಕಚ್ಚಿರುವುದು ಶೋಚನೀಯ.
ಮಳೆ, ಗಾಳಿ, ದೋಣಿಗಳಿಗೆ ಹಾನಿಯಿಂದಾಗಿ ಜಿಲ್ಲೆಯ ವಿವಿಧತೆಯಿಂದ ಸಾಕಷ್ಟು ಪ್ರಮಾಣದಲ್ಲಿ ಮೀನುಗಳು ಮಾರುಕಟ್ಟೆಗೆ ಬಾರದೆ ಇರುವುದರಿಂದ ಮೀನಿಗೆ ಬಂಗಾರದ ಬೆಲೆ ಬಂದಿದೆ. ಈ ಹಿಂದೆ ಕಂಡು ಕೇಳರಿಯದ ಬೆಲೆಯಲ್ಲಿ ಮೀನುಗಳು ಮಾರಾಟವಾಗುತ್ತಿವೆಂಬ ಮಾತು ಮೀನು ಪ್ರಿಯರಲ್ಲೇ ಕೇಳಿಬರುತ್ತದೆ. ಮೂರು ಬಂಗಡೆಗೆ 200 ರೂಪಾಯಿ, ಒಂದು ಪಾಂಪ್ಲೆಟ್ ಗೆ 500 ಹೀಗೆ ಬೆಲೆ ಗಗನಕ್ಕೆ ಏರಿದ್ದು ಮೀನು ಪ್ರಿಯರಿಗೆ ನಿರಾಸೆ ಉಂಟು ಮಾಡಿದೆ. ವಿಶೇಷವಾಗಿ ಗಾಳದ ಮೀನುಗಳಿಗೆ ಈ ಬೆಲೆ ಏರಿಕೆಯಾಗಿದ್ದು ಕಂಡುಬಂದಿದೆ.