ಹುಬ್ಬಳ್ಳಿ : ಹುಬ್ಬಳ್ಳಿಯ ಬಿ ವಿ ಬಿ ಕಾಲೇಜು ಆವರಣದಲ್ಲಿ ಮಾಜಿ ಸಭಾಪತಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರ ಕಾರು ಬೈಕ್ ಗೆ ಡಿಕ್ಕಿ ಹೊಡೆದು, ಬೈಕ್ ಸವಾರನಿಗೆ ಗಾಯಗಳಾದ ಘಟನೆ ನಡೆದಿದೆ. ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಪತ್ರಕರ್ತರ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ ಮುಗಿಸಿಕೊಂಡು ಹೋಗುತ್ತಿದ್ದಾಗ ಘಟನೆ ನಡೆದಿದೆ ಎಂದು ವರದಿಯಾಗಿದೆ.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿಯವರ ಕಾರಿಗೆ ಏಕಾಏಕಿ ಬಂದು ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ವಾಹನ ಸವಾರನಿಗೆ ಗಂಭೀರ ಗಾಯವಾಗಿದ್ದು, ಗಾಯಾಳುವನ್ನು ಸವದತ್ತಿ ಮೂಲದ ಕೆಂಚಪ್ಪ ಎಂದು ಗುರುತಿಸಲಾಗಿದೆ. ಡಿಕ್ಕಿ ರಭಸಕ್ಕೆ ಬೈಕ್ ಸವಾರ ಸ್ವಲ್ಪ ಹೊತ್ತು ಪ್ರಜ್ಞೆ ತಪ್ಪಿದ್ದ. ತಕ್ಷಣ ಆತನಿಗೆ ನೀರು ಕೊಟ್ಟು ಸ್ಥಳೀಯರು ಸುಧಾರಿಸಿಕೊಳ್ಳಲು ನೆರವಾದರು. ಬೈಕ್ ಡಿಕ್ಕಿ ಹೊಡೆದು ಕಾರಿನ ಮುಂಭಾಗ ಡ್ಯಾಮೇಜ್ ಆಗಿದೆ.
ತಕ್ಷಣ ಆ್ಯಂಬುಲೆನ್ಸ್ ಗೆ ಫೋನ್ ಮಾಡಿದ್ದರೂ ಅರ್ಧ ಗಂಟೆಯಾದರೂ ಘಟನಾ ಸ್ಥಳಕ್ಕೆ ಆ್ಯಂಬ್ಯುಲೆನ್ಸ್ ಬರಲಿಲ್ಲ. 10 ನಿಮಿಷ ಕಾದು ನಿಂತ ಬಸವರಾಜ ಹೊರಟ್ಟಿ, ನಂತರ ಅಲ್ಲಿಂದ ಬೇರೆ ವಾಹನ ತರಿಸಿಕೊಂಡು ಹೊರಟು ಹೋಗಿದ್ದಾರೆ. ನಂತರ ಗಾಯಾಳುವನ್ನು ಆಟೋ ಮೂಲಕ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.