ಮಂಗಳೂರು: ಪ್ರವೀಣ್ ನೆಟ್ಟಾರು ಮತ್ತು ಸುರತ್ಕಲ್ ಫಾಸಿಲ್ ಹತ್ಯೆ ಬಳಿಕ ದಕ್ಷಿಣ ಕನ್ನಡದಲ್ಲಿ ಉಲ್ಬಣಗೊಂಡಿದ್ದ ಉದ್ವಿಗ್ನತೆ ಶಮನಕ್ಕೆ ಹೇರಲಾಗಿದ್ದ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಕರಾವಳಿಯಲ್ಲಿ ನಡೆದಿದ್ದ ಅಹಿತಕರ ಘಟನೆಗಳು ಮತ್ತು ಸರಣಿ ಹತ್ಯೆಗಳ ಬಳಿಕ ಹೇರಲಾಗಿದ್ದ ನಿರ್ಬಂಧಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಕೆವಿ ರಾಜೇಂದ್ರ ಅವರು ಸಡಿಲಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ನೈಟ್ ಕರ್ಫ್ಯೂ ತೆರವುಗೊಳಿಸಲಾಗಿದೆ. ನಾಳೆ ರಾತ್ರಿ ಅಂಗಡಿ ಮುಂಗಟ್ಟುಗಳಿಗೆ ನಿರ್ಬಂಧ ಇರುವುದಿಲ್ಲ. ವಾಹನ ಸಂಚಾರಕ್ಕೂ ಯಾವುದೇ ನಿರ್ಬಂಧ ಇರುವುದಿಲ್ಲ. ಜಿಲ್ಲಾಡಳಿತ ಜಿಲ್ಲೆಯಾದ್ಯಂತ ನೈಟ್ ಕರ್ಫ್ಯೂ ಹಿಂಪಡೆದುಕೊಂಡಿದೆ. ಇನ್ನು ನೈಟ್ ಕರ್ಫ್ಯೂ ಹಿಂಪಡೆದುಕೊಂಡಿದ್ದರೂ ಜಿಲ್ಲಾದ್ಯಂತ ನಿಷೇಧಾಜ್ಞೆ ಮುಂದುವರೆಸಲಾಗಿದೆ. ಆಗಸ್ಟ್ 8 ರಿಂದ 14ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ವಿಸ್ತರಿಸಲಾಗಿದೆ.
ಜಿಲ್ಲೆಯಲ್ಲಿ ನಡೆದಿದ್ದ ಸರಣಿ ಕೊಲೆಗಳ ಹಿನ್ನೆಲೆಯಲ್ಲಿ ನಿರ್ಬಂಧಗಳನ್ನು ಹೇರಲಾಗಿತ್ತು. ಜಿಲ್ಲೆಯಲ್ಲಿ ಸಿಆರ್ ಪಿಸಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಮದ್ಯದಂಗಡಿಗಳ ಬಂದ್ ಮಾಡಲಾಗಿತ್ತು. ಇದೀಗ ಶಾಂತಿ ಮರಳಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕೆವಿ ರಾಜೇಂದ್ರ ಅವರು, ನಿರ್ಬಂಧಗಳನ್ನು ತೆರವುಗೊಳಿಸಿದ್ದಾರೆ.