ಹೊನ್ನಾವರ: ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ಮಾಡಿದ್ದು, ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿ ವಿನೋದ್ ನಾಯ್ಕ ರಾಯಲ್‌ಕೇರಿ ಅವರನ್ನು ಆಯ್ಕೆ ಮಾಡಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯಕ್ ಅವರು ಆದೇಶ ಹೊರಡಿಸಿದ್ದಾರೆ. ಬಿಜೆಪಿಯ ಕಾರ್ಯಕರ್ತರಾಗಿ ಹಂತಹಂತವಾಗಿ ವಿವಿಧ ಹುದ್ದೆ ಸಮರ್ಥವಾಗಿ ನಿಭಾಯಿಸುವ ಮೂಲಕ ರಾಜಕೀಯದಲ್ಲಿ ಅಪಾರ ಅನುಭವ ಹೊಂದಿರುವ ವಿನೋದ್ ನಾಯ್ಕ, ಪಕ್ಷದ ಓರ್ವ ನಿಷ್ಠಾವಂತ ಕಾರ್ಯಕರ್ತನಾಗಿ ತಳಮಟ್ಟದಿಂದ ಸೇವೆ ಸಲ್ಲಿಸಿದವರು.
ಈ ಹಿಂದೆ ಹೊನ್ನಾವರ- ಕುಮಟಾ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿಯಾಗಿ, ಬಿಜೆಪಿ ತಾಲೂಕಾ ಅಧ್ಯಕ್ಷರಾಗಿ, ಒಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ವ್ಯಾಪಾರಸ್ಥರ ಪ್ರಕೋಷ್ಠದ ಜಿಲ್ಲಾ ಸಂಚಾಲಕರಾಗಿ, ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಸಹ ಸಂಚಾಲಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪಕ್ಷ ವಹಿಸಿದ ಹುದ್ದೆಯನ್ನು ಅತಿ ಜವಾಬ್ದಾರಿಯುತವಾಗಿ ನಿರ್ವಹಿಸುವ ಮೂಲಕ ಪಕ್ಷ ಸಂಘಟನೆ ನಡೆಸಿದ್ದಾರೆ.
ಹೊನ್ನಾವರ ಪಟ್ಟಣ ಪಂಚಾಯತಿ ಉಪಾಧ್ಯಕ್ಷರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ತಮ್ಮ ಅಭಿವೃದ್ಧಿಪರ ಚಿಂತನೆಗಳೊಂದಿಗೆ ಪಟ್ಟಣದ ಅಭಿವೃದ್ಧಿಯಲ್ಲಿ ಹಲವು ರೀತಿಯಲ್ಲಿ ಶ್ರಮಿಸಿರುವುದು ಇವರು ಜನಪ್ರತಿನಿಧಿಯಾಗಿ ಮಾಡಿದ ಜನಪರ ಕಾಳಜಿಯಾಗಿದೆ.
ಇವರ ಅಧಿಕಾರವಧಿಯಲ್ಲಿ ಮಾಡಿದ ಕಾರ್ಯ ಜನರು ಇಂದಿಗೂ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ವಿಶೇಷವಾಗಿದೆ.
ಜಿಲ್ಲೆಯ ಸಂಸದರಾಗಿ ಸತತವಾಗಿ ಆಯ್ಕೆಯಾಗುತ್ತಿರುವ ಅನಂತಕುಮಾರ್ ಹೆಗಡೆಯವರೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಸಕಾಲಕ್ಕೆ ಪಕ್ಷ ಸಂಘಟನೆಯ ಸಲಹೆ- ಸೂಚನೆ, ಮಾರ್ಗದರ್ಶನ ಪಡೆಯುತ್ತಾ ಅವರ ಕೃಪಾಕಟಾಕ್ಷದಿಂದ ವಿಜಿಲೆನ್ಸಿ ಕಮಿಟಿಯ ಸದಸ್ಯರಾಗಿ, ಬಿಎಸ್‌ಎನ್‌ಎಲ್ ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು. ವಿಶ್ವೇಶ್ವರ ಹೆಗಡೆ ಕಾಗೇರಿಯವರ ಆಪ್ತರಾಗಿಯೂ ಅವರ ಸಲಹೆ ಸೂಚನೆಯಂತೆ ಪಕ್ಷ ಸಂಘಟಿಸಿಕೊಂಡು ಬಂದಿದ್ದಾರೆ.