ಕಾರವಾರ : ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸಿ, ಸೇವೆ ಮಾಡುತ್ತಿರುವ ಅಂಕೋಲಾ ತಾಲ್ಲೂಕಿನ ಆಶಾ ಕಾರ್ಯಕರ್ತೆಯರಿಗೆ ಶಾಸಕಿ ರೂಪಾಲಿ ನಾಯ್ಕ ತಮ್ಮ ಸ್ವಂತ ಖರ್ಚಿನಲ್ಲಿ ಸೀರೆ ಮತ್ತು ಛತ್ರಿಯನ್ನು ವಿತರಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹರ್‌ಘರ್ ತಿರಂಗ ಕಾರ್ಯಕ್ರಮವನ್ಮು ಹಮ್ಮಿಕೊಳ್ಳಲಾಗಿದೆ. ಇದನ್ನೂ ಕೂಡ ಪ್ರತಿ ಮನೆ ಮನೆಗೂ ತಲುಪಿಸುವ ಕಾರ್ಯ ಮಾಡಬೇಕು. ಧ್ವಜ ಹಾರಿಸುವ ಕುರಿತು ಮತ್ತು ಅದಕ್ಕೆ ಅಪಮಾನ ಮಾಡದೇ ಇರುವ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಎಂದು ಸೂಚಿಸಿದರು.
ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಮನೆ ಮನೆಯಲ್ಲಿ ಧ್ವಜ ಹಾರಿಸಲು ಅವಕಾಶವನ್ನು ಕಲ್ಪಿಸಿದೆ. ಹಿಂದೆ ಅಧಿಕಾರಿಗಳು, ಜನಪ್ರತಿನಿಧಿಗಳು ಅಷ್ಟೇ ಧ್ವಜಹಾರಿಸಲು ಅವಕಾಶವಿತ್ತು. ಆದರೆ, ಈಗ ಪ್ರತಿಯೊಬ್ಬ ಸಾಮಾನ್ಯನೂ ಕೂಡ ತಮ್ಮ ಮನೆಯಲ್ಲಿ ಧ್ವಜವನ್ನು ಹಾರಿಸಬಹುದಾಗಿದೆ.
ದೇಶಾಭಿಮಾನವನ್ನು ತೋರಿಸಲು ಪ್ರತಿಯೊಬ್ಬರು ಧ್ವಜಕ್ಕೆ ಗೌರವವನ್ನು ಸೂಚಿಸಬೇಕು. ಗಡಿಯಲ್ಲಿ ಯೋಧರು ನಮ್ಮ ಪ್ರಾಣ ಕಾಪಾಡಲು ಶ್ರಮಿಸುತ್ತಿದ್ದಾರೆ. ನಾವೂ ಕೂಡ ಅವರ ರಕ್ಷಣೆಗೆ ಪ್ರಾರ್ಥನೆ ಮಾಡಬೇಕಿದೆ. ಭಾರತ ಮಾತೆಯನ್ನು ನಾವು ಪೂಜಿಸಿ ಗೌರವಿಸಬೇಕು. ಆ ತಾಯಿ ಆಶೀರ್ವಾದದಿಂದ ನಾವು ಇಂದು ಅಮೃತ ಮಹೋತ್ಸವ ಆಚರಣೆಗೆ ಸಾಧ್ಯವಾಗಿದೆ.
ಅಶಾ ಕಾರ್ಯಕರ್ತೆಯರು ಬಡತನ, ವೈಯಕ್ತಿಕ ಸಮಸ್ಯೆಗಳನ್ನು ನುಂಗಿಕೊಂಡು ಸಮಾಜಸೇವೆ ಮಾಡುತ್ತಾರೆ. ಸರ್ಕಾರದ ಯಾವುದೇ ಯೋಜನೆ ಬಂದರೂ ಜನರಿಗೆ ತಲುಪಿಸುವಲ್ಲಿ ಇವರ ಪಾತ್ರ ದೊಡ್ಡದು. ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಸರ್ಕಾರದ ಯೋಜನೆ ಜನರಿಗೆ ತಲುಪಿಸುತ್ತಾರೆ. ಇವರು ಮಾಡುವ ಕೆಲಸಕ್ಕೆ ಏನು ಕೊಟ್ಟರೂ ಕಡಿಮೆ. ಆದರೆ ನನ್ನ ಅಳಿಲು ಸೇವೆಯನ್ನು ನೀಡಿದ್ದೇನೆ. ಇವರಿಗೆ ಇನ್ನೂ ಹೆಚ್ಚಿನ ಸಹಾಯ, ಸೌಲಭ್ಯ ಕಲ್ಪಿಸುವ ಅಗತ್ಯತೆ ಇದೆ. ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷರು, ಮಂಡಲದ ಅಧ್ಯಕ್ಷರು, ಶಿವಮೊಗ್ಗ ಪ್ರಭಾರಿಗಳು, ಜಿಲ್ಲಾ ಪ್ರಮುಖರು, ತಹಶೀಲ್ದಾರರು, ತಾಲೂಕು ಆರೋಗ್ಯ ಅಧಿಕಾರಿಗಳು, ವಿವಿಧ ಮೋರ್ಚಾ ಪದಾಧಿಕಾರಿಗಳು, ಪ್ರಮುಖರು ಮತ್ತಿತರರು ಇದ್ದರು.