ಕುಮಟಾ : ಆಝಾದಿಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕೊಂಕಣ ಎಜುಕೇಶನ್ ಟ್ರಸ್ಟ್ ನ ಸಿವಿಎಸ್‌ಕೆ ಪ್ರೌಢಶಾಲೆಯವರು “ಡೈಮಂಡ್ ರನ್” ಹೆಸರಿನಲ್ಲಿ ಧ್ವಜಧಾರಿ ವಿದ್ಯಾರ್ಥಿಗಳಿಂದ ಪಟ್ಟಣದಾದ್ಯಂತ ಓಟ ನಡೆಸುವ ಮೂಲಕ ಸ್ವಾತಂತ್ರ್ಯ ಅಮೃತ ಮಹೋತ್ಸವದ ಕಾರ್ಯಕ್ರಮ ಸರಣಿಗೆ ರಂಗು ತಂದರು. ತಾಲೂಕಿನ ತಹಶೀಲ್ದಾರ್ ಕಚೇರಿಯ ಎದುರಿನಲ್ಲಿ ಕುಮಟಾ – ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಕೆ. ಶೆಟ್ಟಿ ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹಾನ್ ನಾಯಕರನ್ನು ಸ್ಮರಿಸಿಕೊಳ್ಳುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ನರೇಂದ್ರ ಮೋದಿಯವರು ಅಮೃತ ಮಹೋತ್ಸವದ ಸವಿನೆನಪಿನಲ್ಲಿ ಎಲ್ಲೆಡೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಂಯೋಜಿಸಲು ಕರೆ ನೀಡಿದ್ದು, ಕೊಂಕಣ ಎಜುಕೇಶನ್ ಟ್ರಸ್ಟ್ ಅರ್ಥಪೂರ್ಣ ಕಾರ್ಯಕ್ರಮವನ್ನು ಸಂಯೋಜಿಸಿರುವುದು ಹೆಮ್ಮೆಯ ವಿಚಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ವಿದ್ಯಾರ್ಥಿಗಳು ದೇಶದ ಕುರಿತಾಗಿ ಜಾಗೃತರಾಗಬೇಕು, ಸುಭದ್ರ ಭಾರತ ನಿರ್ಮಾಣಕ್ಕೆ ಯುವಜನತೆ ಮುಂದಾಗಬೇಕು ಎಂದು ಕರೆ ನೀಡಿದರು.
ತಹಶೀಲ್ದಾರ್ ಕಛೇರಿಯ ಎದುರಿನಿಂದ ಪ್ರಾರಂಭಗೊಂಡ ಡೈಮಂಡ್ ರನ್ ಗಿಬ್ ವೃತ್ತದ ಮೂಲಕ ಬಸ್ತಿಪೇಟೆ ಮಾರ್ಗವಾಗಿ, ಕುಮಟಾ ಪಟ್ಟಣ ಪ್ರವೇಶಿಸಿತು. ಶ್ರೀ ಶಾಂತೇರಿ ಕಾಮಾಕ್ಷಿ ದೇವಾಲಯದ ವತಿಯಿಂದ ಸ್ವಾಗತ ಮಾಡಿ, ವಿದ್ಯಾರ್ಥಿಗಳಿಗೆ ಅಲ್ಪೋಪಹಾರ ವ್ಯವಸ್ಥೆ ಕಲ್ಪಿಸಲಾಗಿತ್ತು. ನಂತರ ಪಟ್ಟಣದ ವಿವಿಧ ದಾರಿಗಳ ಮೂಲಕ ಸಂಚರಿಸಿದ ವಿದ್ಯಾರ್ಥಿಗಳು ಜಯಘೋಷಗಳನ್ನು ಕೂಗುವ ಮೂಲಕ ಜಾಗೃತಿ ಮೂಡಿಸಿದರು. ಮರಣವನ್ನಪ್ಪಿದ ಸ್ವಾತಂತ್ರ್ಯ ಹೋರಾಟಗಾರನ್ನು ಸ್ಮರಿಸಿದರು. ಪಟ್ಟಣದ ಮಣಕಿ ಮೈದಾನದಲ್ಲಿ ಕಾರ್ಯಕ್ರಮ ಸಂಪನ್ನವಾಯಿತು.
ಕಾರ್ಯಕ್ರಮದಲ್ಲಿ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಗೌರವ ಕಾರ್ಯದರ್ಶಿ ಮುರಳೀಧರ ಪ್ರಭು, ಜಂಟೀ ಕಾರ್ಯದರ್ಶಿ ಶೇಷಗಿರಿ ಶಾನಭಾಗ, ವಿಶ್ವಸ್ಥರಾದ ಅನಂತ ಶಾನಭಾಗ, ರಾಮಕೃಷ್ಣ ಗೋಳಿ, ಸಲಹೆಗಾರರಾದ ಬಿ.ಎಸ್ ಗೌಡ, ಆರ್.ಹೆಚ್ ದೇಶಭಂಡಾರಿ, ವಿಧಾತ್ರಿ ಅಕಾಡೆಮಿಯ ಗುರುರಾಜ ಶೆಟ್ಟಿ, ಪ್ರಾಂಶುಪಾಲರಾದ ಕಿರಣ ಭಟ್ಟ, ಮುಖ್ಯ ಅಧ್ಯಾಪಕಿ ಸುಮಾ ಪ್ರಭು ಹಾಜರಿದ್ದರು. ಶಿಕ್ಷಕರಾದ ಚಿದಾನಂದ ಭಂಡಾರಿ, ಜಯರಾಜ ಶೇರುಗಾರ, ನಾಗರಾಜ ಭಂಡಾರಿ, ವಿನಾಯಕ ಹೆಗಡೆಕರ, ಗೌರೀಶ ಭಂಡಾರಿ, ಗಣೇಶ ಜೋಶಿ ಇನ್ನಿತರರು ಸಹಕರಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ರಂಗು ಹೆಚ್ಚಿಸಿದರು.