ಗೋಕರ್ಣ: ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ನಮ್ಮ ರಾಷ್ಟ್ರಕ್ಕೆ ಶ್ರೇಷ್ಠ ಧರ್ಮಯೋಧರನ್ನು ಸೃಷ್ಟಿಸಿ, ಸಮರ್ಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು, ಇದಕ್ಕೆ ಮಾಡುವ ದಾನ ಕೂಡಾ ನಿಜವಾದ ರಾಷ್ಟ್ರಸೇವೆ. ಅದು ಸರ್ವಶ್ರೇಷ್ಠ ಎಂದು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ಹೇಳಿದರು.
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಶುಕ್ರವಾರ ನಡೆದ ಎಂಟನೇ ದಾನ- ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ದಾನ ಎನ್ನುವುದು ಲಕ್ಷ್ಮಿಯ ಶ್ರೇಷ್ಠ ರೂಪ. ಸತ್ಕಾರ್ಯಗಳಿಗೆ ನೀಡುವ ದಾನ ನಮಗೆ ಪುಣ್ಯಫಲ ನೀಡಿದರೆ, ನಾವು ಮಾಡಿದ ದಾನ ದುರ್ವಿನಿಯೋಗವಾದರೆ ಅದರ ಪಾಪ ನಮಗೂ ತಟ್ಟುತ್ತದೆ. ಆದ್ದರಿಂದ ಸ್ಥಳ, ಸಮಯ, ಸಂದರ್ಭ ನೋಡಿ ಯೋಗ್ಯರಾದವರಿಗೆ ದಾನ ಮಾಡಬೇಕು ಎಂದು ಸಲಹೆ ಮಾಡಿದರು.
ಸತ್ಪಾತ್ರರಿಗೆ ದಾನ ಮಾಡಿದ ಬಳಿಕ ಉಳಿದದ್ದನ್ನು ಅನುಭವಿಸಬೇಕು ಎಂದು ಶಾಸ್ತ್ರ ಹೇಳುತ್ತದೆ; ಕೊಟ್ಟು ತಿನ್ನುವುದು ಭಾರತೀಯ ಸಂಸ್ಕøತಿ ಎಂದು ಬಣ್ಣಿಸಿದರು.
ನಮ್ಮದು ಅಂದುಕೊಂಡಿದ್ದನ್ನು ಬಿಟ್ಟುಕೊಡುವ ಕಾರ್ಯ ಸಣ್ಣದಲ್ಲ. ಆದ್ದರಿಂದ ದಾನ ಎಲ್ಲಕ್ಕಿಂತ ಕಠಿಣ. ದಾನದ ಮುಂದಿನ ಹೆಜ್ಜೆಯೇ ಮಾನ. ದಾನವೇ ಮಾನವಾಗಿ ಪರಿಣಮಿಸುತ್ತದೆ. ನಮಗೆ ಜೀವನವನ್ನು ಕೊಟ್ಟ ಭಗವಂತ ಸದಾ ನಮ್ಮನ್ನು ಅಳೆಯುತ್ತಾ ಇರುತ್ತಾನೆ. ಆತನ ಅಳತೆಯಲ್ಲಿ ನಾವೆಂದೂ ಕಡಿಮೆಯಾಗಬಾರದು. ಸತ್ಪಾತ್ರರಿಗೆ ದಾನ ಮಾಡುವ ಮೂಲಕ ಭಗವಂತನ ಮೆಚ್ಚುಗೆಗೆ ನಾವು ಪಾತ್ರರಾಗಬೇಕು ಎಂದರು.
ಪೂಜೆ ಮಾಡಿದ ಬಳಿಕ ಪ್ರಸಾದ ಸಿಕ್ಕುವ ಹಾಗೆ ದಾನ ಮಾಡಿದವರಿಗೆ ಆಶೀರ್ವಾದಪೂರ್ವಕವಾಗಿ ಮಾನ ಸಲ್ಲುತ್ತದೆ; ಭಗವಂತ ಕೊಟ್ಟದ್ದನ್ನು ಅವನ ಕಾರ್ಯಕ್ಕೆ ಬಿಟ್ಟುಕೊಡುವುದು ನಿಜವಾದ ದಾನ; ಲಕ್ಷ್ಮಿಗೆ ಲಕ್ಷ ರೂಪ; ಲಕ್ಷ್ಮಿ ಬಗೆಬಗೆಯ ರೂಪ ತಾಳುತ್ತಾಳೆ; ಅನ್ನ, ಅರಿವೆ, ಆಶ್ರಯ, ವಿದ್ಯೆ ಹೀಗೆ ಲಕ್ಷ್ಮಿಗೆ ಹಲವು ರೂಪ. ಆದರೆ ಯಾವುದು ಹೆಚ್ಚಿದರೂ ತೊಂದರೆ. ಬದುಕಿನಲ್ಲಿ ಯಾವ ಸೌಲಭ್ಯಗಳೂ ಅಗತ್ಯಕ್ಕಿಂತ ಹೆಚ್ಚಾದಾಗ ಅದು ತೊಂದರೆಯಾಗುತ್ತದೆ ಎಂದು ವಿಶ್ಲೇಷಿಸಿದರು.
ಶ್ರೀಮಠ ಜಾರಿಗೆ ತಂದಿರುವ ಮುಷ್ಟಿಭಿಕ್ಷೆ ಯೋಜನೆ, ಶ್ರೀಮಠದ ಯಾವ ಶಿಷ್ಯರಿಗೂ ಆಹಾರ ಅತಿಯಾಗಬಾರದು ಎಂಬ ದೃಷ್ಟಿಯಿಂದ ಜಾರಿಗೆ ತಂದ ಯೋಜನೆ. ನಾವು ಉಣ್ಣುವ ಅನ್ನ ಸಿದ್ಧಪಡಿಸುವ ಮುನ್ನ ಒಂದು ಮುಷ್ಟಿ ಅಕ್ಕಿಯನ್ನು ದಾನವಾಗಿ ನೀಡುವುದು ಮುಷ್ಟಿ ಭಿಕ್ಷೆ; ಇನ್ನು ಸ್ವಲ್ಪ ಬೇಕು ಎಂದು ಮನಸು ಹೇಳುವಾಗಲೇ ಊಟ ನಿಲ್ಲಿಸಬೇಕು. ಅತಿಯಾದ ಸೇವನೆ ಸ್ವಾಸ್ಥ್ಯ ಆರೋಗ್ಯವನ್ನು ಕಡಿಮೆ ಮಾಡುತ್ತದೆ ಎಂಬ ಕಾರಣಕ್ಕೆ ಮುಷ್ಟಿಭಿಕ್ಷೆ ಎಂದರು.
ದೇವರ ನೈವೇದ್ಯಕ್ಕೆ ತಂದ ಬಳಿಕ ಉಳಿದದ್ದು ಅಮೃತ ಪ್ರಸಾದವಾಗುವಂತೆ ನಮ್ಮ ದಾನದ ಬಳಿಕ ಉಳಿಯುವ ಸಂಪತ್ತು ಕೂಡಾ ಶ್ರೇಷ್ಠ.
ವೈಭವ, ಮನೋರಂಜನೆಗಾಗಿ ಮಾಡುವ ಖರ್ಚನ್ನು ದಾನ ಮಾಡುವ ಮೂಲಕ ಸಾರ್ಥಕಪಡಿಸಿಕೊಳ್ಳಬೇಕು. ಬದುಕಿನ ಅಗತ್ಯತೆಗಿಂತ ಹೆಚ್ಚು ಖರ್ಚು ಮಾಡುವುದು ಪಾಪ ಕಾರ್ಯ. ಆಡಂಬರ ವೈಭೋಗ ಅನರ್ಥಕ್ಕೆ ಕಾರಣವಾಗುತ್ತದೆ. ಬಳಕೆಗೆ ಬೇಕಾದ್ದನ್ನು ಮಾತ್ರ ಬದುಕಿನಲ್ಲಿ ಇಟ್ಟುಕೊಂಡರೆ ಜೀವನ ಸುಖಮಯ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಶ್ರೀ ಸನ್ನಿಧಿ ನಮಗೆ ಎಲ್ಲವನ್ನೂ ಒದಗಿಸುತ್ತದೆ. ಆದ್ದರಿಂದ ನಮ್ಮ ಸಂಪಾದನೆಯ ಒಂದು ಭಾಗವನ್ನು ಸಮಾಜಕ್ಕೆ ನೀಡಬೇಕು. ಶ್ರೀಗಳು ಕೈಗೊಂಡ ಸತ್ಕಾರ್ಯಗಳಿಗೆ ಇಂಥ ದಾನ ಸಂದರೆ ಅದು ಸರ್ವಶ್ರೇಷ್ಠ ಎಂದು ಬಣ್ಣಿಸಿದರು.
ದಾನವನ್ನು ಎಲ್ಲಿ ಕೊಡಬೇಕು; ಯಾವ ಕಾರ್ಯಕ್ಕೆ ಕೊಡಬೇಕು ಎಂಬ ಸರಿಯಾದ ನಿರ್ಧಾರ ಕೈಗೊಳ್ಳುವುದು ಅತ್ಯಂತ ಮುಖ್ಯ. ಎಷ್ಟು ಕೊಟ್ಟೆ ಎನ್ನುವುದಕ್ಕಿಂತ ಯಾವುದಕ್ಕೆ ಕೊಟ್ಟೆ ಎನ್ನುವುದು ಮತ್ತು ಕೊಡುವ ಭಾವ ಅತ್ಯಂತ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಪ್ರಾಚೀನ ಭಾರತದ ಜ್ಞಾನ ಭಂಡಾರ ಪರಕೀಯರ ಆಕ್ರಮಣದಿಂದ ನಾಶವಾಗಿದೆ. ಅದನ್ನು ಪುನರ್ ನಿರ್ಮಿಸುವ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ ಪರಮಪೂಜ್ಯ ಶ್ರೀಗಳಂಥವರ ಮಾರ್ಗದರ್ಶನ ಸಮಾಜಕ್ಕೆ ಅಗತ್ಯ. ವಿಷ್ಣುಗುಪ್ತ ವಿಶ್ವವಿದ್ಯಾಪೀಠದಂಥ ಸತ್ಕಾರ್ಯಗಳು ಇಡೀ ದೇಶಕ್ಕೆ ಮಾದರಿ ಎಂದರು ಹೇಳಿದರು.
ಈ ಪ್ರದೇಶದ ಖಾರ್ವಿ ಸಮಾಜದ ವತಿಯಿಂದ ಶನಿವಾರ ಶ್ರೀಗಳಿಗೆ ಪಾದಪೂಜೆ ನೆರವೇರಿಸಲಾಯಿತು. ಶ್ರೀಮಠದ ಪಾರಂಪರಿಕ ಶಿಷ್ಯರಾದ 18 ಸಮುದಾಯದವರೂ ಚಾತುರ್ಮಾಸ್ಯ ಸಂದರ್ಭದಲ್ಲಿ ಶ್ರೀಗಳಿಗೆ ತಮ್ಮ ಸಮಾಜದ ಸೇವೆ ಸಮರ್ಪಣೆ ಮಾಡುತ್ತಿರುವುದು ವಿಶೇಷ.
ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಬಾರ್ಕೂರಿನ ತಾಮರಸ ಕೂಟದವರಿಂದ ದಂಡಕ ದಮನ ಯಕ್ಷಗಾನ ತಾಳಮದ್ದಳೆ ನಡೆಯಿತು.