ಹಳಿಯಾಳ : ತಾಲೂಕಿನಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಗಳಿಗೆಯಲ್ಲಿ ಪುರಸಭೆ ಸಿದ್ಧಪಡಿಸಿದ ಲೋಗೊ ವಿವಾದಕ್ಕೆ ಕಾರಣವಾಗಿ ಬಿಜೆಪಿ, ಹಿಂದೂ ಸಂಘಟನೆಗಳ ಮುಖಂಡರು ತಡರಾತ್ರಿ ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ. ಪುರಸಭೆ ಸಿದ್ಧಪಡಿಸಿದ ಲೋಗೊದಲ್ಲಿ ತಾಜ್ ಮಹಲ್, ಕುತುಬ್ ಮಿನಾರ್ ಮುಂತಾದ ಒಂದೇ ಧರ್ಮದ ಸ್ಮಾರಕಗಳ ಚಿತ್ರವಿದ್ದು ಅದನ್ನು ಬದಲಿಸಬೇಕು ಎಂಬುದು ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರ ಆಗ್ರಹವಾಗಿತ್ತು, ಈವೇಳೆ ಮಾತಿಗೆ ಮಾತು ಬೆಳೆದು ಕೈ ಮಿಲಾಯಿಸುವ ಹಂತ ತಲುಪಿದ್ದು ಮಧ್ಯ ಪ್ರವೇಶಿಸಿದ ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.
ಈ ಸಂಬಂಧ ಬೆಳಗ್ಗೆಯಿಂದಲೂ ಪುರಸಭೆ ಎದುರು ವಾಗ್ವಾದ ನಡೆದಿತ್ತು . ಸಾಯಂಕಾಲ ಬಿಜೆಪಿ ಪ್ರಮುಖರು ನಡೆಸಿದ ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಪಿ.ಜಿ ಶಿಂಧೆ ರಾತ್ರಿ ಲೋಗೊ ಬದಲಿಸುವುದಾಗಿ ತಿಳಿಸಿದ್ದರು.
ಆದರೆ ಪುರಸಭೆ ಅಧ್ಯಕ್ಷ ಬಸರಿಕಟ್ಟಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ರಾತ್ರಿಯಾದರೂ ಲೋಗೊ ಬದಲಾಗದ ಕಾರಣ ಪುರಸಭೆ ಎದುರು ರಾತ್ರೊರಾತ್ರಿ ಹಿಂದೂಪರ ಹಾಗೂ ಬಿಜೆಪಿ ಕಾರ್ಯಕರ್ತರು ಹಠಾತ್ ಪ್ರತಿಭಟನೆ ನಡೆಸಿದ್ದಾರೆ.