ಹೊನ್ನಾವರ : ೨೦೧೯ ಮೇ ತಿಂಗಳಲ್ಲಿ ನಡೆದ ಹೊನ್ನಾವರ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಪರೇಶ ಮೇಸ್ತ ಸಾವಿನ ಪ್ರಥಮ ಆರೋಪಿಯಾಗಿರುವ ಆಝಾದ ಜಮಾಲ ಅಣ್ಣಿಗೇರಿಯವರು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ನಾಮಪತ್ರ ಸಲ್ಲಿಸಿ, ಪಕ್ಷದ ನೀತಿ ನಿಯಮಾವಳಿಗಳನ್ನು ಉಲ್ಲಂಘಿಸಿ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆಯಾಗಿದ್ದಾರೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ತಿಳಿಸಿದ್ದಾರೆ. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಏರ್ಪಡಿಸಿದÀ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ನೀತಿ ನಿಯಮಾವಳಿಗಳಿವೆ. ಪಟ್ಟಣ ಪಂಚಾಯತ ಚುನಾವಣಾ ಸಂದರ್ಭದಲ್ಲಿ ಆಝಾದ ಅಣ್ಣಿಗೇರಿ ಪಕ್ಷದ ಟಿಕೇಟ್ ಕೋರಿ ಪಕ್ಷಕ್ಕೆ ಅರ್ಜಿ ಸಲ್ಲಿಸಿಯೂ ಇರಲಿಲ್ಲ. ಆದರೆ ಹಿಂದಿನ ಅವಧಿಯಲ್ಲಿ ಹೊನ್ನಾವರ ಪಟ್ಟಣ ಪಂಚಾಯತನಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯನಾಗಿದ್ದ ಆಝಾದ ಅಣ್ಣಿಗೇರಿಯವರನ್ನು ಕಾಂಗ್ರೆಸ್ ಪಕ್ಷ ಪಟ್ಟಣ ಪಂಚಾಯತದ ಅಧ್ಯಕ್ಷನಾಗಿ ಆಯ್ಕೆ ಮಾಡಿತ್ತು. ಆದರೂ ಅವರು ಪಕ್ಷದ ಸಹಾಯ, ಸಹಕಾರವನ್ನು ದಿಕ್ಕರಿಸಿ ೨೦೧೯ರ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಪಟ್ಟಣದ ಗಾಂಧಿನಗರ ೧೧ನೇ ವಾರ್ಡನಿಂದ ಪಕ್ಷದ ಅದಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾದ ನನ್ನ ವಿರುದ್ಧ ಮತ್ತು ಅಶುರಖಾನಗಲ್ಲಿ ೧೫ನೇ ವಾರ್ಡಿನಿಂದ ಸ್ಪರ್ಧಿಸಿದ್ದ ಸೈಯದ್ ಮೂಸಾ ಅಣ್ಣಿಗೇರಿ, ಅವರದೇ ಚಿಕ್ಕಪ್ಪನ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ, ಆಝಾದ ಅಣ್ಣಿಗೇರಿ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣರಾಗಿದ್ದರು. ಇಂತಹ ಆರೋಪಿಗಳು, ಪಕ್ಷದ್ರೋಹಿಗಳು ಪಕ್ಷದ ಕಾರ್ಯಕರ್ತರಾಗಿರಲೂ ಸಾಧ್ಯವೇ ಇಲ್ಲಾ. ಪಕ್ಷದ ಅಧಿಕೃತ ಎ ಮತ್ತು ಬಿ ಫರ‍್ಮ ಪಡೆದು ಚುನಾವಣೆ ಸ್ಪರ್ಧಿಸುವ ಅಭ್ಯರ್ಥಿಗಳ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಪಕ್ಷ ವಿರೋಧಿಗಳ ಬಗ್ಗೆ ಪಕ್ಷಕ್ಕೆ ತಕ್ಷಣ ವಿವರಣೆ ನೀಡಿ ಉಚ್ಛಾಟಿಸಲಾಗಿದೆ. ಇಂತಹ ನೀಚ ಕೃತ್ಯಕ್ಕೆ ಸಾಕ್ಷಿ ಕೇಳುವವರಿಗೆ ಅಂಗೈ ಹುಣ್ಣಿಗೆ ಕನ್ನಡಿ ಏಕೆ? ಎಂದು ತೆಂಗೇರಿ ಪ್ರಶ್ನಿಸಿದ್ದಾರೆ.
ರಾಜ್ಯದ ಬಿ.ಜೆ.ಪಿ. ಸರಕಾರದಿಂದ ಕೊಡುಗೆ ರೂಪದಲ್ಲಿ ಪಡೆದಿದ್ದ ಜಿಲ್ಲಾ ವಕ್ಸ ಬೋರ್ಡ ಉಪಾಧ್ಯಕ್ಷ ಸ್ಥಾನ ಕೈ ತಪ್ಪಲು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ಕಾರಣ ಎನ್ನುವ ಆಝಾದ ಅಣ್ಣಿಗೇರಿ, ಪತ್ರಿಕಾ ಜಾಹಿರಾತಿನಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪೋಟೋ ಹಾಕದೇ ಇರುವುದು ಇಷ್ಟಕ್ಕೆಲ್ಲಾ ಕಾರಣ ಎನ್ನುವ ಬಾಲಿಶ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಅವರು ಉತ್ತರಕನ್ನಡ ಜಿಲ್ಲಾ ವಕ್ಫ್ ಉಪಾಧ್ಯಕ್ಷ ಸ್ಥಾನ ಸಿಕ್ಕಿರುವ ಬಗ್ಗೆ ಅಭಿನಂದಿಸಿ ನನ್ನ ಪೋಟೋ ಒಬ್ಬ ಎ೧ ಕೊಲೆ ಆರೋಪಿ ಬಳಸಿದ್ದರೆ ನಾನು ಅವರ ಮೇಲೆ ಕ್ರಿಮಿನಲ್ ಕೇಸ್ ಹಾಕುತ್ತಿದ್ದೆ ಎಂದು ಜಗದೀಪ ತೆಂಗೇರಿ ಸ್ಪಷ್ಟಪಡಿಸಿದ್ದಾರೆ.
ಕೊಲೆ ಆರೋಪಿ ಆಝಾದ ಅಣ್ಣಿಗೇರಿಯವರಿಗೆ ಜಿಲ್ಲಾ ವಕ್ಫ್ ಉಪಾಧ್ಯಕ್ಷ ಸ್ಥಾನ ನೀಡುರುವುದು ಬಿ.ಜೆ.ಪಿಯ ಕೊಡುಗೆ ಎಂದು ಆರೋಪಿಸಿದರು. ಸರಕಾರದ ಮಟ್ಟದಲ್ಲಿ ಈ ರೀತಿಯ ಅವಘಡ ನಡೆಯುವುದು ಅಕ್ಷಮ್ಯ ಅಪರಾಧ ಎಂದರು. ಈಗ ಜನಾಕ್ರೋಶಕ್ಕೆ ಮಣಿದು ಆದೇಶ ಹಿಂಪಡೆದಿದ್ದು ಸೂಕ್ತ ಕ್ರಮವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗ ವಿಭಾಗದ ಕೆ.ಎಚ್. ಗೌಡ, ಜಿಲ್ಲಾ ಕಾಂಗ್ರೆಸ್ ಇಂಟೆಕ್ ಕಾರ್ಯದರ್ಶಿ ಕೇಶವ ಮೇಸ್ತ,ಹೊನ್ನಾವರ ನಗರ ಘಟಕದ ಅಧ್ಯಕ್ಷ ಉದಯ ಮೇಸ್ತ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಮಹೇಶ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಸುಭಾಷ ಮೇಸ್ತ, ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣ ಹರಿಜನ, ಜಿಲ್ಲಾ ಕಾಂಗ್ರೆಸ್ ಸೇವಾದಳದ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಮಾರಿಮನೆ, ಕೂಲಿಕಾರ್ಮಿಕ ವಿಭಾಗದ ಕಾರ್ಯದರ್ಶಿ ಶ್ರೀಕಾಂತ ಮೇಸ್ತ,ಉದಯ ಮೇಸ್ತ ಇನ್ನು ಮುಂತಾದವರು ಉಪಸ್ಥಿತರಿದ್ದರು.