ಕುಮಟಾ: ೭೬ನೇ ಸ್ವಾತಂತ್ರ ಉತ್ಸವದ ಅಂಗವಾಗಿ ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಅಂಗಸಂಸ್ಥೆಗಳಾದ ಆರ್‌ಡಿಎಸ್‌ಎಚ್ ಬಾಲಮಂದಿರ, ಸರಸ್ವತಿ ವಿದ್ಯಾಕೇಂದ್ರ, ಸಿವಿಎಸ್‌ಕೆ ಪ್ರೌಢಶಾಲೆ, ಸರಸ್ವತಿ ಪ.ಪೂ. ಕಾಲೇಜ್, ಜಾನಕಿ ಪ್ರಭು ಪ್ರತಿಭಾ ಚೈತನ್ಯ ಕೇಂದ್ರ, ಸರಸ್ವತಿ ಮಾಳಪ್ಪ ಕಾಮತ ಕೃಷಿ ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರ ಇವುಗಳ ಸಹಯೋಗದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ವಿಠ್ಠಲ ಆರ್. ನಾಯಕ ಧ್ವಜಾರೋಹಣೆ ನೆರವೇರಿಸಿ ಧ್ವಜವಂದನೆಗೈದರು. ಕಾರ್ಯದರ್ಶಿಗಳಾದ ಮುರಳೀಧರ ಪ್ರಭು ಸ್ವಾತಂತ್ರ್ಯೋತ್ಸವದ ಸಂದೇಶ ನೀಡುತ್ತ, ಇನ್ನು ೨೫ ವರ್ಷಗಳಲ್ಲಿ ಸ್ವಾತಂತ್ರ್ಯೋತ್ಸವದ ಶತಮಾನೋತ್ಸವ ಆಚರಿಸಲಿದ್ದೇವೆ. ಇಂದಿನ ವಿದ್ಯಾರ್ಥಿಗಳು ಭಾರತವನ್ನು ವಿಶ್ವ ಗುರುವಾಗಿಸುವಲ್ಲಿ ಮಹತ್ತರ ಪಾತ್ರ ವಹಿಸಬೇಕು. ನಮ್ಮೆಲ್ಲರ ಕರ್ತವ್ಯವನ್ನು ನಾವು ಸ್ಮರಿಸಬೇಕು. ಅಮೃತ ಮಹೋತ್ಸವದ ಈ ಘಳಿಗೆಯಲ್ಲಿ ‘ಡೈಮಂಡ್ ರನ್’ ಕರ‍್ಯಕ್ರಮವನ್ನು ಸಂಯೋಜಿಸಿ, ಸಂಸ್ಥೆಯ ೭೫ ವಿದ್ಯಾರ್ಥಿಗಳು ನಗರದ ಬೀದಿಗಳಲ್ಲಿ ಜಾಗೃತಿ ಕರ‍್ಯಕ್ರಮವನ್ನು ಹಮ್ಮಿಕೊಂಡಿದ್ದು ಶತಮಾನೋತ್ಸವದ ಕಡೆಗೆ ನಾವು ಚಲಿಸುತ್ತಿರುವುದನ್ನು ಅರ್ಥೈಸುವಂತೆ ಮಾಡಿತು ಎಂದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ವಾಲಗಳ್ಳಿಯ ಶಾಂತಾ ರಾಮ ಶೆಟ್ಟಿ, ಹಾಗೂ ಬರ್ಗಿಯ ಶ್ರೀಧರ ಆರ್, ಕಾಮತ ಕುಟುಂಬದವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕಾಲೇಜು ವಿದ್ಯಾರ್ಥಿಗಳ ನೃತ್ಯ ಕರ‍್ಯಕ್ರಮಕ್ಕೆ ರಂಗು ತಂದಿತು. ಅಮೃತ ಮಹೋತ್ಸವದ ಸಂದರ್ಭದಲ್ಲಿ ಏರ್ಪಡಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ೯೫ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಸುಮಾರು ೭೫ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ವೇಷ-ಭೂಷಣ ತೊಟ್ಟು ಧ್ವಜಾರೋಹಣ ಸಂದರ್ಭದಲ್ಲಿ ಹಾಜರಿದ್ದು ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತ ಮಹನೀಯರುಗಳನ್ನು ಸ್ಮರಿಸುವಂತೆ ಮಾಡಿದರು.
ಇಂಡಿಯನ್ ಬುಕ್ ಆಫ್ ರೆಕಾರ್ಡ್ನ ಸಾಧಕ, ಸಂಸ್ಥೆಯ ಯುಕೆಜಿ ವಿದ್ಯಾರ್ಥಿ ಸಂಪ್ರೀತ್ ನಾಯ್ಕ ಈತನ ಭಾಷಣ ಹಾಗೂ ದೇಶಭಕ್ತಿ ಗೀತೆ ಗಮನ ಸೆಳೆಯಿತು. ಇದೇ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ರಾಜಕಾರಣಿ ಆರ್.ವಿ.ದೇಶಪಾಂಡೆ ಅವರು ನೀಡಿರುವ ಬಹುಮಾನವನ್ನು ಎಸ್‌ಎಸ್‌ಎಲ್‌ಸಿ ಯಲ್ಲಿ ಪ್ರಥಮ ಸ್ಥಾನ ಪಡೆದ ನಾಲ್ಕು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ೭೫ರ ಅಂಕೆಯಲ್ಲಿ ವಿದ್ಯಾರ್ಥಿಗಳನ್ನು ಸಂಯೋಜಿಸಲಾಗಿತ್ತು.
ಸಂಸ್ಥೆಯ ಹಿರಿಯ ವಿಶ್ವಸ್ಥರಾದ ರಮೇಶ ಪ್ರಭು ಸಮಾರೋಪದ ನುಡಿಗಳೊಂದಿಗೆ ಸರ್ವರನ್ನೂ ವಂದಿಸಿದರು. ಶಿಕ್ಷಕರುಗಳಾದ ಗೌರೀಶ ಭಂಡಾರಿ, ಗಣೇಶ ಜೋಶಿ, ಚಿದಾನಂದ ಭಂಡಾರಿ, ಅನಿತಾ ಪಟಗಾರ, ರಮ್ಯಾ ಸಭಾಹಿತ, ಜಯಾ ಶಾನಭಾಗ ಕಾರ್ಯಕ್ರಮವನ್ನು ನಿರ್ವಹಿಸಿದರು. ದೈಹಿಕ ಶಿಕ್ಷಕರಾದ ಜಯರಾಜ ಶೇರುಗಾರ, ನಾಗರಾಜ ಭಂಡಾರಿ, ಸುಮಂಗಲಾ ನಾಯ್ಕ ಕಾರ್ಯಕ್ರಮದ ಮೇಲುಸ್ತುವಾರಿ ವಹಿಸಿದ್ದರು.
ವಿಶ್ವಸ್ಥರುಗಳಾದ ಡಿ.ಡಿ.ಕಾಮತ, ಗಜಾನನ ಕಿಣಿ, ಡಾ. ವೆಂಕಟೇಶ ಶಾನಭಾಗ, ಭರತ ಭಂಡಾರ್ಕರ್, ರಾಮಕೃಷ್ಣ ಶಾನಭಾಗ ಗೋಳಿ, ಅನಂತ ಶಾನಭಾಗ, ಸಲಹೆಗಾರರಾದ ಆರ್.ಎಚ್.ದೇಶಭಂಡಾರಿ, ಬಿ.ಎಸ್.ಗೌಡ, ಅಂಗ ಸಂಸ್ಥೆಗಳ ಮುಖ್ಯ ಶಿಕ್ಷಕರು, ಕಾಲೇಜಿನ ಪ್ರಾಂಶುಪಾಲರು, ವಿಧಾತ್ರಿ ಅಕಾಡೆಮಿಯ ಮುಖ್ಯಸ್ಥರಾದ ಗುರುರಾಜ ಶೆಟ್ಟಿ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು, ಚಾಲಕ-ನಿರ್ವಾಕರು, ಪಾಲಕರು, ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.