ಗೋಕರ್ಣ: ತಮ್ಮ ಹಿತವನ್ನೇ ಬಲಿಕೊಟ್ಟು ಪರೋಪಕಾರ ಮಾಡುವುದು ಸತ್ಪುರುಷರ ಲಕ್ಷಣ. ಪರೋಪಕಾರ, ಕರುಣೆಯನ್ನು ಬದುಕಿನಲ್ಲಿ ತುಂಬಿಕೊಂಡು ಬದುಕಿನ ಸಾರ್ಥಕತೆ ಗಳಿಸಿಕೊಳ್ಳೋಣ ಎಂದು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಬುಧವಾರ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ತಮಗೆ ತೊಂದರೆಯಾಗದಂತೆ ಪರೋಪಕಾರ ಮಾಡುವವರು ಸಾಮಾನ್ಯರು. ತಮ್ಮ ಸ್ವಾರ್ಥಕ್ಕಾಗಿ ಬೇರೆಯವರ ಶ್ರೇಯಸ್ಸು ಹಾಳು ಮಾಡುವವರು ಮಾನುಷ ರಾಕ್ಷಸರು. ಆದರೆ ತಮಗೆ ಯಾವ ಹಿತವೂ ಇಲ್ಲದಿದ್ದರೂ, ಬೇರೆಯವರಿಗೆ ತೊಂದರೆ ಕೊಡುವ ಇನ್ನೊಂದು ವರ್ಗವಿದೆ. ಇಂಥ ವರ್ಗವೂ ಇದೆ ಎದು ಬತೃಹರಿ ಹೇಳಿದ್ದಾಗಿ ವಿವರಿಸಿದರು.
ತಾವು ಹಸಿದರೂ ಬೇರೆಯವರ ಹೊಟ್ಟೆ ತುಂಬಿಸುವ ಭಾವ ಅದು ಸತ್ಪುರಷರದ್ದು. ಬೇರೆಯವರ ಅಗತ್ಯ ನಮ್ಮ ಅಗತ್ಯಕ್ಕಿಂತ ದೊಡ್ಡದು ಎಂಬ ಭಾವ ಅದು. ತಮ್ಮ ಹೊಟ್ಟೆ ತುಂಬಿದ ಮೇಲೆ ಬೇರೆಯವರಿಗೆ ಕೊಡುವವರು ಸಾಮಾನ್ಯರು; ಹಸಿದವನ ರೊಟ್ಟಿಯನ್ನು ಕಸಿದು ತಿನ್ನುವವರು ಮಾನುಷ ರಾಕ್ಷಸರು; ಹೊಟ್ಟೆ ತುಂಬಿದ ವ್ಯಕ್ತಿ ಹಸಿದವನ ರೊಟ್ಟಿ ಕಿತ್ತುಕೊಂಡು ಎಸೆಯುವವನು ನಾಲ್ಕನೇ ವರ್ಗಕ್ಕೆ ಸೇರಿದವನು.

ತನ್ನಲ್ಲೂ ಕರುಣೆ ಇಲ್ಲದ ದಾನವಾಧಮ, ತನ್ನಲ್ಲಿ ಮಾತ್ರ ಕನಿಕರ ಇರುವ ದಾನವ, ತನ್ನವರಲ್ಲಿ ಮಾತ್ರ ಕರುಣೆ ಇರುವ ಮಾನವ, ತನ್ನವರಲ್ಲದವರಲ್ಲೂ ಕನಿಕರ ತೋರುವ ಮಾನವೋತ್ತಮ ಹೀಗೆ ನಾಲ್ಕು ವರ್ಗವನ್ನು ಮೀರಿ ಐದನೇ ವರ್ಗ ಶತ್ರುಗಳಲ್ಲೂ ಕರುಣೆ ತೋರುವಂಥದ್ದು; ಐದನೇ ವರ್ಗದವರು ಗುರುಗಳೋ ಅಥವಾ ದೇವರೋ ಆಗಿರುತ್ತಾರೆ ಎಂದು ವಿಶ್ಲೇಷಿಸಿದರು.
ತನಗೆ ಯಾವ ತೊಂದರೆಯೂ ಆಗಬಾರದು ಎನ್ನುವುದು ಸಹಜ ಬಯಕೆ. ಆದರೆ ತನ್ನ ಮೇಲೂ ಕನಿಕರ ಇಲ್ಲದ ನಿದರ್ಶನಗಳು ಹಿರಣ್ಯಕಶುಪು ಮತ್ತು ರಾವಣನ ಜೀವನದ ಕೆಲ ಘಟ್ಟಗಳನ್ನು ಉದಾಹರಿಸಬಹುದು. ಹಿರಣ್ಯಕಶುಪು ತಪಸ್ಸು ಮಾಡುವಾಗ ಮೈಮೇಲೆ ಹುತ್ತ ಬೆಳೆದು ಕೇವಲ ಎಲುಬು ಮಾತ್ರ ಉಳಿದಿತ್ತು. ಹಾಗೆ ತನ್ನ ಮೇಲೂ ಕನಿಕರ ಇಲ್ಲದ ಅಪರೂಪದ ನಿದರ್ಶನ ಇದು. ಅಂತೆಯೇ ರಾವಣ ಕೂಡಾ ಹತ್ತು ಸಾವಿರ ವರ್ಷ ತಪಸ್ಸು ಮಾಡಿ ತನ್ನ ಒಂದೊಂದೇ ತಲೆಯನ್ನು ಕಡಿದು ಬ್ರಹ್ಮದೇವರಿಗೆ ಅರ್ಪಿಸುತ್ತಾ ಬರುತ್ತಾನೆ. ಇದು ರಾವಣನಿಗೆ ತನ್ನ ಬಗೆಯೂ ಕನಿಕರ ಇಲ್ಲದ ಪರಿ ಇದು ಎಂದು ಬಣ್ಣಿಸಿದರು. ರಾಮಾಯಣದ ಕೊನೆಯಲ್ಲಿ ರಾವಣ ಸಾವಿಗಾಗಿ ಯುದ್ಧ ಮಾಡಿದ. ಇದು ಆತನ ಮೇಲೂ ಆತನಿಗೆ ಕನಿಕರ ಇರಲಿಲ್ಲ ಎಂದು ವಿವರಿಸಿದರು.

RELATED ARTICLES  ಸುವರ್ಣ ತ್ರಿಭುಜ ಭೋಟಿನ ದುರಂತದಲ್ಲಿ ಸಿಲುಕಿದವರ ಮನೆಗೆ ತೆರಳಿ ನೆರವಿನ ಹಸ್ತ ಚಾಚಿದ ಶಾಸಕ ಸುನೀಲ್ ನಾಯ್ಕ

ತನ್ನ ಮೇಲೆ ಮಾತ್ರ ಕರುಣೆ ಇರುವ ನಿದರ್ಶನ ಮಹಾಭಾರತದ ದುರ್ಯೋದನ. ತನ್ನವರೆಲ್ಲರನ್ನೂ ಯುದ್ಧದಲ್ಲಿ ಕಳೆದುಕೊಂಡ ಬಳಿಕ ಜೀವ ಉಳಿಸಿಕೊಳ್ಳುವ ಸಲುವಾಗಿ ವೈಶಂಪಾಯನ ಸರೋವರದಲ್ಲಿ ಅಡಗಿಕೊಳ್ಳುತ್ತಾನೆ ಎಂದರು.

ಮಾನವರಿಗೆ ಸಾಮಾನ್ಯವಾಗಿ ತನ್ನ ಬಗ್ಗೆ ಹಾಗೂ ತನ್ನವರ ಬಗ್ಗೆ ಕರುಣೆ ಇರುವುದು ಸಹಜ. ಅಂತೆಯೇ ಮಾನವೋತ್ತಮರೂ ಇಂದಿನ ಸಮಾಜದಲ್ಲಿ ವಿರಳವಾಗಿ ಕಾಣಸಿಗುತ್ತಾರೆ. ತನ್ನದವರಲ್ಲದವರಿಗೂ ಸಹಾಯ ಮಾಡುವುದು ದೈವೀಗುಣ. ಪ್ರಾಣಿ ಪಕ್ಷಿಗಳು, ಆರ್ತರ ಮೇಲೆ ಇವರಿಗೆ ದಯೆ ಇರುತ್ತದೆ. ಇದು ಮಾನವೋತ್ತಮರ ಗುಣ ಎಂದು ವಿವರಿಸಿದರು.
ಕೊನೆಯ ವರ್ಗ ಶತ್ರುವತ್ಸಲರು. ಇವರು ತಮ್ಮ ಶತ್ರುಗಳನ್ನೂ ಪ್ರೀತಿ ಮಾಡುವವರು; ಅವರ ಬಗ್ಗೆ ಕಾರುಣ್ಯ ಹೊಂದಿರುವವರು. ಇಂಥವರು ಕೋಟಿಗೊಬ್ಬರು. ರಾಮನಲ್ಲಿ ಈ ಗುಣವನ್ನು ಹೆಜ್ಜೆ ಹೆಜ್ಜೆಗೂ ಕಾಣುತ್ತೇವೆ. ಅಪಕಾರ ಮಾಡಿದವರ ಬಗ್ಗೆಯೂ ಕನಿಕರ ತೋರಿದ ಹಲವು ನಿದರ್ಶನಗಳು ರಾಮಾಯಣದಲ್ಲಿ ಬರುತ್ತದೆ. ಉದಾಹರಣೆಗೆ ತನ್ನನ್ನು ಕಾಡಿಗೆ ಅಟ್ಟಲು ಕಾರಣವಾದ ಕೈಕೇಯಿಯ ಬಗ್ಗೆಯೂ ರಾಮ ಅಪಾರ ಕರುಣೆ ಹೊಂದಿದ್ದ. ಆಕೆಯ ಬಗ್ಗೆಯೂ ರಾಮ ಹಗೆ ಸಾಧಿಸಲಿಲ್ಲ ಎಂದು ಬಣ್ಣಿಸಿದರು.

RELATED ARTICLES  ಕುಮಟಾ ಸರಕಾರಿ ಆಸ್ಪತ್ರೆಯಲ್ಲಿ ಓರ್ವನ‌ ಮರಣ : ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪ್ರತಿಭಟಿಸಿದ ಕುಟುಂಬಸ್ತರು

ಪಾದುಕೆಯನ್ನು ಭರತ ಒಯ್ಯುವ ವೇಳೆ ಭರತನಿಗೆ ಆದೇಶ ನೀಡಿದ ರಾಮ, ಕೈಕೇಯಿಯನ್ನು ನೋಯಿಸಬಾರದು; ನನ್ನ ಪಾದದ ಮೇಲೆ, ಸೀತೆಯ ಮೇಲೆ ಆಣೆ ಎನ್ನುತ್ತಾನೆ. ಇದು ರಾಮ ಕಾರುಣ್ಯಮೂರ್ತಿ ಎನ್ನುವುದಕ್ಕೆ ಸಾಕ್ಷಿ. ಅಣ್ಣನ ಕಾರಣದಿಂದಾಗಿ ತಾಯಿಯನ್ನು ಭರತ ಹತ್ಯೆ ಮಾಡುವುದಿಲ್ಲ. ಇಲ್ಲದಿದ್ದರೆ ಕೊಲ್ಲುತ್ತಿದ್ದೆ ಎಂದು ಭರತ ಹೇಳಿದ ಉಲ್ಲೇಖವಿದೆ ಎಂದರು.

ಇಂದ್ರನ ಪುತ್ರನಾದ ಕಾಗೆಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದು ಇನ್ನೊಂದು ಸಂದರ್ಭ. ಬ್ರಹ್ಮಾಸ್ತ್ರದಿಂದ ರಕ್ಷಣೆಗಾಗಿ ಮೊರೆ ಹೋದಾಗ ಕಾಗೆಯ ಜೀವದ ಬದಲು ಒಂದು ಕಣ್ಣನ್ನು ಮಾತ್ರ ಕೀಳುತ್ತದೆ. ಇದು ಇನ್ನೊಂದು ನಿದರ್ಶನವಾದರೆ, ಯುದ್ಧದಲ್ಲಿ ಗಾಯಾಳುವಾಗಿದ್ದ ರಾವಣನಿಗೆ ವಿಶ್ರಾಂತಿ ಪಡೆದು ಮುಂದಿನ ದಿನ ಬಂದು ಯುದ್ಧ ಎದುರಿಸುವಂತೆ ಸೂಚಿಸುತ್ತಾನೆ. ಇದು ರಾಮನ ಶ್ರೇಷ್ಠಗುಣ ಎಂದು ವಿವರಿಸಿದರು.

ಧಾರ್ಮಿಕ ಕಾರ್ಯಕ್ರಮ ಅಂಗವಾಗಿ ಶ್ರೀಗಳಿಗೆ ತುಲಾಭಾರ ಸೇವೆ ನೆರವೇರಿತು. ರುದ್ರಹವನ, ರಾಮತಾರಕ ಹವನ, ಚಂಡೀಪಾರಾಯಣ, ಗಣಪತಿ ಹೋಮ, ಪವಮಾನ ಹೋಮಗಳು ನಡೆದವು. ಸುಳ್ಯದ ಕಾಂಚಿಕಾಮಕೋಟಿ ವೇದಪಾಠ ಶಾಲೆ ಮತ್ತು ಕಾರವಾರದ ಪದ್ಮಪುಷ್ಪ ಗುರುಕುಲ ಮಕ್ಕಳಿಂದ ಸಪ್ತಶತಿ ಪಾರಾಯಣ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸಾಗರದ ಗೋಮಾತಾ ತಾಳಮದ್ದಳೆ ಬಳಗದಿಂದ ಸೀತಾಕಲ್ಯಾಣ ತಾಳಮದ್ದಳೆ ನಡೆಯಿತು.
=====================