ಕುಮಟಾ:ಸಂಘಟನೆಗಳು ಚಳುವಳಿಗಾಗಿ ಸೃಷ್ಟಿಯಾಗಬೇಕು, ಚಳುವಳಿಯಲ್ಲಿ ತೊಡಗಿಸಿಕೊಳ್ಳಬೇಕು, ಚಳುವಳಿಯು ನಿಲ್ಲಕೂಡದು, ನಿರಂತರವಾಗಿರಬೇಕು, ಚಳುವಳಿಯಿಂದಷ್ಟೇ ಬೋಧಕರ ಹಿತರಕ್ಷಣೆ ಸಾಧ್ಯ ಎಂದು ಖ್ಯಾತ ಶಿಕ್ಷಣ ಚಿಂತಕ ಹಾಗೂ ಶಿಕ್ಷಕರ ಪರ ಸಕ್ರೀಯ ಹೋರಾಟಗಾರ ಡಾ.ಆರ್.ಎಂ.ಕುಬೇರಪ್ಪ ನುಡಿದರು.

ಅವರು ತಾಲ್ಲೂಕಿನ ಬಗ್ಗೋಣದ ಮಡಿವಾಳಕೇರಿಯಲ್ಲಿನ ಎಸ್.ಎಸ್.ಪೈರವರ ನಿವಾಸವಾದ “ಶ್ರೀ ಮೂಕಾಂಬಿಕಾ”ದಲ್ಲಿ ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ತಿಳಿಸಂಜೆಯ ಪರ್ವ ಕಾಲದಲ್ಲಿ ಕರ್ನಾಟಕ ರಾಜ್ಯ ಬೋಧಕರ ಸಂಘವನ್ನು ಉದ್ಘಾಟಿಸಿ ಮಾತನ್ನಾಡಿದರು.

ಎಂಬತ್ತರ ದಶಕದಲ್ಲಿ ರಾಜ್ಯದಲ್ಲಿ ನಡೆದ ಶಿಕ್ಷಕರ ಪರವಾದ ಬಹು ದೊಡ್ಡ ಚಳುವಳಿಯ ಫಲವಾಗಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸುರವರ ಸರ್ಕಾರವು ಅದುವರೆಗೆ ಆಡಳಿತ ಮಂಡಳಿಯ ಖಾತೆಗೆ ಜಮಾಗೊಳಿಸುತಿದ್ದ ಶಿಕ್ಷಕರ ವೇತನವು ಶಿಕ್ಷಕರಿಗೆ ಪೂರ್ಣಪ್ರಮಾಣದಲ್ಲಿ ತಲುಪದಿರುವುದನ್ನು ಮನಗಂಡು ನೇರವಾಗಿ ಶಿಕ್ಷಕರ ಖಾತೆಗೆ ಹೋಗುವಂತಾದದು ಇತಿಹಾಸ. ಮುಂದೆ ಅನುದಾನ ವ್ಯವಸ್ಥೆಯಾಗಿದ್ದು, ಗುಂಡುರಾವ್ ಸರ್ಕಾರದಲ್ಲಿ ದೊಡ್ಡ ಪ್ರಮಾಣದಲ್ಲಿ ವೇತನ ಶ್ರೇಣಿಯಾಗಿದ್ದು, ವೇತನ ಆಯೋಗವು ರಚನೆಯಾಗಿರುವುದು ಚಳುವಳಿಯಿಂದಾದ ಬೆಳವಣಿಗೆ. ನಂತರದಲ್ಲಿ ಶಿಕ್ಷಕರ ಸಂಘಟನೆಗಳನ್ನು ರಾಜಕೀಯಕ್ಕೆ ಬಳಸಿಕೊಂಡ ಪರಿಣಾಮವಾಗಿ ಚಳುವಳಿಯು ಸತ್ತು ಹೋಯಿತು. ಚಳುವಳಿಯನ್ನು ಪುನರುಜ್ಜೀವನಗೊಳಿಸಲು ಶಕ್ತಿಯುತವಾದ ಹಾಗೂ ತನ್ನನ್ನು ಒತ್ತೆಯಾಗಿಡದ ಶಿಕ್ಷಕರ ಸಂಘಟನೆಯು ಪ್ರಸ್ತುತದಲ್ಲಿ ಅಗತ್ಯವೆಂದರು.

RELATED ARTICLES  ಸಣ್ಣ ಬಲಸೆ ಶಾಲೆಯ ವಾರ್ಷಿಕ ಸಮ್ಮೇಳನ: ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ವೈದ್ಯ

ಸಭಾಧ್ಯಕ್ಷತೆಯನ್ನು ವಹಿಸಿದ್ದ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟರವರು ಮಾತನ್ನಾಡಿ, “ಬಲಂ ಶಕ್ತಿಃ ಸುಖಂ ಸಿದ್ದಿಃ” ಎಂಬ ಕೌಟಿಲ್ಯನ ಉಕ್ತಿಯನ್ನು ಧ್ಯೇಯವಾಕ್ಯವನ್ನಾಗಿಸಿಕೊಂಡು, ಸಮಗ್ರ ಶೈಕ್ಷಣಿಕ ವ್ಯವಸ್ಥೆಯ ಕುರಿತು ಉದಾತ್ತವಾದ ಚಿಂತನವಿಟ್ಟುಕೊಂಡು, ಶುಭ್ರ ಶ್ವೇತವಸನದ ಸಮವಸ್ತç ಸಂಹಿತೆಯೊಂದಿಗೆ ಒಕ್ಕೋರಲಿನಿಂದ ಸುಸಂಘಟಿತರಾದ ಪ್ರಜ್ಞಾವಂತರನ್ನೊಳಗೊಂಡ ಕರ್ನಾಟಕ ರಾಜ್ಯ ಬೋಧಕರ ಸಂಘವೆಂಬ ಹೆಸರಿನಲ್ಲಿ ರಾಜ್ಯಮಟ್ಟದ ಶಿಕ್ಷಕರ ಸಂಘಟನೆಯು ಕುಮಟಾದಂತಹ ಪುಟ್ಟ ನಗರದಲ್ಲಿ ಜನ್ಮ ತಳೆದಿರುವುದು ಅಭಿಮಾನದ ವಿಷಯವೆಂದರು.

ಅಭ್ಯಾಗತರಾಗಿದ್ದ ವಿಚಾರವಾದಿ- ಜನ ನಾಯಕ ಸೂರಜ್ ನಾಯ್ಕ ಸೋನಿ, ಪ್ರಾಯೋಗಿಕ ಅರಿವಿಲ್ಲದ ಅನನುಭವಿಗಳು ಆಡಳಿತಾತ್ಮಕ ಹುದ್ದೆಯಲ್ಲಿರುವುದರಿಂದ ಉಂಟಾಗುವ ವೈಪರಿತ್ಯದಿಂದ ಬಲಿಪಶುವಾಗುವುದನ್ನು ತಡೆಗಟ್ಟಲು ಹೋರಾಟದ ಮನೋಭಾವನೆವುಳ್ಳ ವೃತ್ತಿಪರ ಸಂಘಟನೆಗಳ ಸೃಷ್ಟಿ ಅನಿವಾರ್ಯವೆಂದರು.
ಸಮಾಜಮುಖಿ ಧುರೀಣ ಪ್ರೊ.ಎಂ.ಜಿ.ಭಟ್ಟ ಮಾತನ್ನಾಡಿ, ಅರ್ಹತೆಯಿಲ್ಲದೇ ಮುಂದಿನ ತರಗತಿಗೆ ತಳ್ಳಲ್ಪಡುತ್ತಿರುವ ದೋಷಪೂರ್ಣ ಶಿಕ್ಷಣ ಪದ್ದತಿಯಲ್ಲಿ ಉನ್ನತ ಶಿಕ್ಷಣವನ್ನು ಪಡೆದು ಮತ್ತೆ- ಮತ್ತೆ ಪರೀಕ್ಷೆಗಳನ್ನು ಬರೆದು ನೌಕರಿಯನ್ನು ಪಡೆಯುವುದೊಂದೇ ಗುರಿಯಾಗಿಸಿಕೊಂಡವರ ನಡುವೆ ಬದುಕಿಗೆ ಬೇಕಾದ ಬೇಸಾಯ, ಹೈನುಗಾರಿಕೆ ಹಾಗೂ ತೋಟಗಾರಿಕೆಯನ್ನು ಮಾಡುವವರಾರೆಂದು ಚಿಂತಿಸ ಬೇಕಾಗಿದೆಯೆಂದರು.

ಸಘಟನೆಯ ರಾಜ್ಯಾಧ್ಯಕ್ಷ ಮಂಜುನಾಥ ಗಾಂವಕರ್ ಬರ್ಗಿಯವರು ಆಶಯ ನುಡಿಯನ್ನಾಡುತ್ತಾ, ಬೋಧಕರಿಂದ- ಬೋಧಕರಿಗಾಗಿ – ಬೋಧಕರಿಗೋಸ್ಕರವೇ ಹುಟ್ಟು ಹಾಕಲ್ಪಟ್ಟ ಸಂಘಟನೆಯು ಕರ್ನಾಟಕ ರಾಜ್ಯ ಬೋಧಕರ ಸಂಘಟನೆಯಾಗಿದ್ದು, ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ವಿಶ್ವಾಸವನ್ನು ಪಡೆದು ಬೋಧಕರ ಬೇಕು – ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕವಾಗಿ ಕಾರ್ಯತತ್ವರವಾಗಲಿದ್ದು, ಬೋಧಕರಲ್ಲಿ ಅಂತರ್ಗತವಾಗಿದ್ದ ಸೃಜನಶೀಲ ಪ್ರತಿಭೆಯ ಅನಾವರಣಕ್ಕೆ ವೇದಿಕೆಯಾಗಿ, ಬೋಧಕರ ಗಟ್ಟಿಧ್ವನಿಯಾಗಿ ಬೆಳೆಯಲು ಸಾತ್ವಿಕರ ಬೆಂಬಲ ಬೇಕೆಂದರು.
ಕರ್ನಾಟಕ ರಾಜ್ಯ ಬೋಧಕರ ಸಂಘಕ್ಕೆ ತುಂಬು ಹೃದಯದಿಂದ ಬೆಂಬಲಿಸುತ್ತಿರುವ ಸಂಧ್ಯಾ ಶಿವಾನಂದ ಪೈ ದಂಪತಿಗಳನ್ನು ಸಂಘದ ವತಿಯಿಂದ ಆಪ್ತವಾಗಿ ಸನ್ಮಾನಿಸಲಾಯಿತು.

RELATED ARTICLES  ಮುಂಡಳ್ಳಿ ಪ್ರೌಢಶಾಲೆಯಲ್ಲಿ ನಡೆಯಿತು ಪರಿಸರ ಜಾಗೃತಿ ಕಾರ್ಯಕ್ರಮ

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಪೈ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಎನ್.ಬಿ.ನಾಯಕ ಸೂರ್ವೆ ವಂದಿಸಿದರು. ಸಂಚಾಲಕ ವಿಜಯ್ ಕುಮಾರ್ ನಾಯ್ಕ ನಿರೂಪಿಸಿದರು. ಭಟ್ಕಳದ ನ್ಯೂ ಇಂಗ್ಲೀಷ್ ಸ್ಕೂಲ್‌ನ್ ಜನಪ್ರಿಯ ಹಿರಿಯ ಶಿಕ್ಷಕಿ ರಾಜಂ ಹಿಚ್ಕಡ್ ಸಂಘದ ಕುರಿತು ಸದಭಿಪ್ರಾಯವನ್ನು ವ್ಯಕ್ತಪಡಿಸಿ, ತಮ್ಮ ಹಿತರಕ್ಷಣೆಗೆ ಸಂಘದ ರಾಜ್ಯಾಧ್ಯಕ್ಷರಿಗೆ ಲಿಖಿತ ಮನವಿಯನ್ನು ಸಲ್ಲಿಸಿದರು.

ಜಾಹಿದ್ ಸಾರಂಗ, ಬಾಲಚಂದ್ರ ಗಾಂವಕರ, ಶಿವಚಂದ್ರ, ರಾಜು ಚಿತ್ರಗಿ, ಜಿ.ಎನ್.ಗಾವಡಿ, ಪ್ರಾಚಾರ್ಯ ಎಸ್.ಜಿ.ಭಟ್ಟ, ಮಹಮ್ಮದ್ ಶಫಿ, ಗೋಪಾಲಕೃಷ್ಣ ಪುರಾಣಿಕ, ದಿವಗಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ದಯಾನಂದ ದೇಶಭಂಡಾರಿ, ವಾಗ್ಮಿ ಚಿದಾನಂದ ಭಂಡಾರಿ ಹಾಗೂ ಗಾನವಿ ನಾಯಕ ಮೊದಲಾದವರಿದ್ದರು.