ಕುಮಟಾ : ತಾಲೂಕಿನ ಕೊಡಂಬಳೆ ಸಮೀಪದ ಯಾಣದಲ್ಲಿ ಅಡಿಕೆ ಕಳ್ಳರು ಶಿವರಾಮ ದೇವು ಗೌಡ ಅವರ ತೋಟದಲ್ಲಿರುವ ಮನೆಯಲ್ಲಿ ಸಾಕಿದ ನಾಯಿಗಳಿಗೆ ವಿಷ ಹಾಕಿ ಕೊಂದು ಹಾಕಿದ್ದು ತಪ್ಪಿಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅವರು ದೂರು ಸಲ್ಲಿಸಿದ್ದಾರೆ .
ಆಗಸ್ಟ್ 10 ರಂದು ತಾನು ಸಾಕಿದ ಐದು ನಾಯಿಗಳು ಒಂದರ ಹಿಂದೊಂದರಂತೆ ಸಾವನ್ನಪ್ಪಿದ್ದವು . ಈ ಬಗ್ಗೆ ಸಂಶಯಗೊಂಡು ನಾಯಿಯನ್ನು ಕುಮಟಾದ ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಮರಣೋತ್ತರ ಪರೀಕ್ಷೆ ನಡೆಸಿದಾಗ ನಾಯಿಗಳಿಗೆ ವಿಷ ಹಾಕಿರುವುದು ವರದಿಯಿಂದ ಗೊತ್ತಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ .
ನಾಯಿಗಳಿಗೆ ವಿಷ ಹಾಕಿ ಕೊಂದಿರುವುದಕ್ಕೆ ಸಂಬಂಧಿಸಿದಂತೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ . ಪ್ರತಿವರ್ಷ ನಮ್ಮ ತೋಟದಿಂದ 5 ರಿಂದ 6 ಕ್ವಿಂಟಲ್ ಅಡಿಕೆ ಕಳ್ಳತನವಾಗುತ್ತಿತ್ತು . ನಾಯಿಗಳಿಗೆ ವಿಷ ಹಾಕಿದವರೇ ಅಡಿಕೆ ಕಳ್ಳತನ ಮಾಡಿದ್ದಾರೆ ಎನ್ನುವುದು ನಮ್ಮ ಅನುಮಾನ ಏಕೆಂದರೆ ನಾಯಿಗಳಿದ್ದರೆ ಕಳ್ಳತನ ಮಾಡಲು ಸಾಧ್ಯವಿಲ್ಲ ಎನ್ನುವುದು ಅವರ ಅರಿವಿಗೆ ಬಂದ ಹಿನ್ನೆಲೆಯಲ್ಲಿ ನಾಯಿಗಳಿಗೆ ವಿಷ ಹಾಕಿ ಕೊಂದಿರಬಹುದು ಎಂದು ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ . ಆರೋಪಿಗಳ ಮನೆಯ ಸಮೀಪವೇ ಕಳೆದ ಮೂರು ತಿಂಗಳ ಹಿಂದೆ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು . ಆ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಶಿವರಾಮ ಗೌಡ ಅವರು ಆಗ್ರಹಿಸಿದ್ದಾರೆ .