ಶಿರಸಿ: ಬೆಳಗಿನಿಂದ ಸುಡು ಬಿಸಲು, ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣವಿದ್ದ ನಗರದಲ್ಲಿ ಸಂಜೆ 5 ಗಂಟೆಯ ಸುಮಾರಿಗೆ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಸುರಿಯಿತು. ಗುಡುಗಿನ ಆರ್ಭಟದೊಂದಿಗೆ ಒಂದೇ ಸಮನೆ ಸುರಿದ ಮಳೆಗೆ ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡವು.
ಏಕಾಏಕಿ ಶುರುವಾದ ಮಳೆಯಿಂದ ಪೇಟೆ ಕೆಲಸಕ್ಕೆ ಹೋದವರು ತಿರುಗಿ ಬರಲಾಗದೇ ಅಂಗಡಿಗಳ ಎದುರು ಆಶ್ರಯ ಪಡೆದರು. ಮಳೆಯ ಅಬ್ಬರದಲ್ಲಿ ವಾಹನ ಚಲಾಯಿಸಲು ಸಾಧ್ಯವಾಗದೇ ವಾಹನ ಚಾಲಕರು ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿಕೊಂಡರು.
ನಗರದ ಮೂಲಕ ಹಾದುಹೋಗುವ ತಾಳಗುಪ್ಪ– ಖಾನಾಪುರ ರಾಜ್ಯ ಹೆದ್ದಾರಿಯು ಅಶ್ವಿನಿ ವೃತ್ತದಲ್ಲಿ ಹೊಳೆಯಂತೆ ಕಾಣುತ್ತಿತ್ತು. ರಸ್ತೆತುಂಬ ನೀರು ನಿಂತು ವಾಹನ ಸವಾರರು ಮುಂದೆ ಸಾಗಲು ಹರಸಾಹಸಪಟ್ಟರು. ನಗರದ ಮಾರಿಕಾಂಬಾ ಕಾಲೇಜಿನ ಆವರಣದಲ್ಲಿ ನೀರು ನಿಂತ ಪರಿಣಾಮ ಆವರಣ ಗೋಡೆಯ ಪಾರ್ಶ್ವ ಕುಸಿದಿದೆ, ಮಳೆಯ ಅಬ್ಬರಕ್ಕೆ ತರಕಾರಿ ಮಾರುಕಟ್ಟೆ ಅಸ್ತವ್ಯಸ್ತಗೊಂಡು, ಕೆಲ ಅಂಗಡಿಗಳ ತರಕಾರಿಗಳು ನೀರಿನಲ್ಲಿ ಕೊಚ್ಚಿ ಹೋದವು.
ಮಳೆಯಿಂದ ತೋಟಕ್ಕೆ ಹಾನಿ
ಯಲ್ಲಾಪುರ: ತಾಲ್ಲೂಕಿನ ಉಮ್ಮಚಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿವಿಧೆಡೆ ಸೋಮವಾರ ಸಂಜೆ ಸುರಿದ ಭಾರೀ ಮಳೆಯಿಂದ ಅಡಿಕೆ ತೋಟ, ಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ತುಡಗುಣಿಯಲ್ಲಿ ಹಳ್ಳದ ಒಡ್ಡು ಒಡೆದು ತೋಟಕ್ಕೆ ನೀರು ನುಗ್ಗಿದ್ದು, ಕೆ. ಪಿ. ಭಟ್ಟ, ರತ್ನಾಕರ ಬಲ್ಸೆ, ಖೈತಾನ್ ಡಿಸೋಜಾ ಅವರ ಅಡಿಕೆ ತೋಟಗಳು ಜಲಾವೃತವಾಗಿ ತೋಟದಲ್ಲಿನ ಗೊಬ್ಬರ, ಸೊಪ್ಪು, ಅಡಿಕೆ ಗಿಡಗಳು ಕೊಚ್ಚಿಕೊಂಡು ಹೋಗಿವೆ.
ಅಂದಾಜು ₹ 20 ಲಕ್ಷ ಹಾನಿಯಾಗಿದೆ. ಸ್ಥಳಕ್ಕೆ ಉಮ್ಮಚಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಗ. ರಾ. ಭಟ್ಟ, ಅಭಿವೃದ್ಧಿ ಅಧಿಕಾರಿ ಜಿ. ಜಿ. ಶೆಟ್ಟಿ ಹಾಗೂ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು.
ಬಿರುಸಿನ ಮಳೆ
ಮುಂಡಗೋಡ: ತಾಲ್ಲೂಕಿನಲ್ಲಿ ಮಂಗಳವಾರ ಸಂಜೆ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಭರ್ಜರಿ ಮಳೆ ಸುರಿಯಿತು. ರಸ್ತೆ ಹಾಗೂ ತಗ್ಗುಪ್ರದೇಶಗಳಲ್ಲಿ ನೀರು ಸಂಗ್ರಹಗೊಂಡಿತ್ತು. ಪಟ್ಟಣದಲ್ಲಿ ಸುರಿದ ಮಳೆಗೆ ಬಂಕಾಪುರ ರಸ್ತೆಯ ಹೆಗಡೆ ಆಸ್ಪತ್ರೆ ಹತ್ತಿರ ರಸ್ತೆ ಮೇಲೆ ಹೆಚ್ಚಿನ ಪ್ರಮಾಣದ ನೀರು ಸಂಗ್ರಹಗೊಂಡು ವಾಹನ ಸವಾರರು, ಪಾದಚಾರಿಗಳು ತೊಂದರೆ ಅನುಭವಿಸಿದರು. ದೇಶಪಾಂಡೆ ನಗರ, ಹಳೂರು, ಬಸ್ ನಿಲ್ದಾಣ ರಸ್ತೆ ಸೇರಿದಂತೆ ಇತರೆಡೆ ಗಟಾರಗಳು ತುಂಬಿ ರಸ್ತೆ ಮೇಲೆ ನೀರು ಹರಿಯತೊಡಗಿತ್ತು.
ಅಗಡಿ ಸನಿಹ ರಸ್ತೆ ಮೇಲೆ ಮರವೊಂದು ಉರುಳಿಬಿದ್ದು ಕೆಲ ಹೊತ್ತು ಸಂಚಾರಕ್ಕೆ ತೊಂದರೆಯಾಯಿತು. ತಾಲ್ಲೂಕಿನ ಕೊಪ್ಪ, ಇಂದೂರ, ಪಾಳಾ, ಶಿಂಗನಳ್ಳಿ, ಮಳಗಿಯಲ್ಲೂ ಬಿರುಸಿನ ಮಳೆಯಾಗಿದೆ. ಪ್ರಸಕ್ತ ಮಳೆಗಾಲದಲ್ಲಿ ಇದೇ ದೊಡ್ಡ ಮಳೆಯಾಗಿದೆ.
ಮಲೆನಾಡಲ್ಲಿ ಧಾರಾಕಾರ ಮಳೆ
ಕಾರವಾರ(ಉತ್ತರ ಕನ್ನಡ): ಜಿಲ್ಲೆಯ ಶಿರಸಿ, ಮುಂಡಗೋಡ ಹಾಗೂ ಹಳಿಯಾಳದಲ್ಲಿ ಮಂಗಳವಾರ ಸಂಜೆ ಧಾರಾಕಾರ ಮಳೆ ಸುರಿದಿದೆ. ಹಲವೆಡೆ ರಸ್ತೆಗಳಲ್ಲಿ ಮಳೆ ನೀರು ನದಿಯಂತೆ ಉಕ್ಕಿಹರಿಯಿತು. ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 208.2 ಮಿ.ಮೀ ಮಳೆಯಾಗಿದ್ದು, ಸರಾಸರಿ 18.9 ಮಿ.ಮೀ ಮಳೆ ಪ್ರಮಾಣ ದಾಖಲಾಗಿದೆ.
ಅಂಕೋಲಾ 17 ಮಿ.ಮೀ, ಭಟ್ಕಳ 5 ಮಿ.ಮೀ, ಹಳಿಯಾಳ 34.8 ಮಿ.ಮೀ, ಹೊನ್ನಾವರ 13.56 ಮಿ.ಮೀ, ಕಾರವಾರ 26.6 ಮಿ.ಮೀ, ಕುಮಟಾ 35.2 ಮಿ.ಮೀ, ಮುಂಡಗೋಡ 19.2 .ಮಿ.ಮೀ, ಸಿದ್ದಾಪುರ 0.6 ಮಿ.ಮೀ, ಶಿರಸಿ 22.5 ಮಿ.ಮೀ, ಜೊಯಿಡಾ 15.8 ಮಿ.ಮೀ, ಯಲ್ಲಾಪುರ 18 ಮಿ.ಮೀ. ಮಳೆಯಾಗಿದೆ.