ಕುಮಟಾ:- ಅಳಕೊಡ್ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆಗೆ ಹಾಕಿದ ಡಾಂಬರು ೪ ತಿಂಗಳಲ್ಲಿಯೇ ಕಿತ್ತು ಹೋಗಿದೆ. ರಸ್ತೆಯು ಮಣ್ಣಿನ ರಾಡಿಯಿಂದ ತುಂಬಿ ಹೋಗಿದ್ದು ಕಂಬಳ ಓಟಕ್ಕೆ ಸಿದ್ಧವಾದಂತೆ ಕಾಣುತ್ತಿದೆ. ರಸ್ತೆಗೆ ಹಾಕಿದ ಡಾಂಬರು ಸಂಪೂರ್ಣ ಮಂಗಮಾಯವಾಗಿದ್ದು ಕವಲೋಡಿ-ಕಣಕಲ್ಲೆ ಮಾರ್ಗವಾಗಿ ಸಂತೆಗುಳಿ ಸಂರ್ಪಕಿಸುವ ರಸ್ತೆ ಇದಾಗಿದೆ. ಸುಮಾರು ೧೧ಕಿ.ಮೀ ರಸ್ತೆಗೆ ಸುಮಾರು ೧೫೦ ಮೀ ಮರುಡಾಂಬರಿಕರಣ ಮಾಡಲಾಗಿದೆ. ರಸ್ತೆಕಾಮಗಾರಿಯನ್ನು ಸಂಪೂರ್ಣ ಕಳಪೆ ಮಟ್ಟದಲ್ಲಿ ನಡೆಸಿರುವ ಪರಿಣಾಮ ರಸ್ತೆ ಹದಗೆಟ್ಟಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇಲ್ಲಿ ಗುತ್ತಿಗೆದಾರನ ಕರಾಮತ್ತು ಎದ್ದು ಕಾಣುತ್ತಿದ್ದು ಕವಲೋಡಿ-ಕಣಕಲ್ಲೆ ರಸ್ತೆಯನ್ನು ಕೆಸರುಗದ್ದೆಯಾಗಿ ನಿರ್ಮಿಸಲು ಪಿಡಬ್ಲುö್ಯಡಿ ಅಧಿಕಾರಿಗಳು ಸಾಥ್ ನೀಡಿದ್ದಾರೆಯೇ ಎಂಬ ಅನುಮಾನ ಶುರುವಾಗಿದೆ. ಉಪ್ಪಿನ ಪಟ್ಟಣ,ಕವಲೋಡಿ,ಕಣಕಲ್ಲೆ ಸೇರಿದಂತೆ ಮತ್ತಿತರ ಊರುಗಳಲ್ಲಿ ಒಟ್ಟೂ ೧೫೦ಕ್ಕೂ ಅಧಿಕ ಮನೆಗಳಿದ್ದು ಅಲ್ಲಿಯ ಜನರು ಈ ರಸ್ತೆಯ ಮೂಲಕವೇ ತೆರಳಬೇಕಾಗಿದ್ದು ರಸ್ತೆಯ ದುಸ್ಥಿತಿಯನ್ನು ಕಂಡು ಲೋಕೋಪಯೋಗಿ ಇಲಾಖೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.