ಕಾರವಾರ : ತಾಲೂಕಿನ ದೋಬಿ ಘಾಟ್ ರಸ್ತೆಯ ಸಾಯಿ ಮಂದಿರದ ಬಳಿ ಗುಡ್ಡ ಕುಸಿತ ಸಂಭವಿಸಿದ್ದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಗುಡ್ಡ ಕುಸಿತದಿಂದಾಗಿ ಗುಡ್ಡದಿಂದ ಜಾರಿದ ಬಂಡೆಗಳು ರಸ್ತೆಯ ಪಕ್ಕ ಬಂದು ಬಿದ್ದಿದೆ. ಆ ಸಂದರ್ಭದಲ್ಲಿ ಯಾವುದೇ ರೀತಿಯ ವಾಹನ ಸಂಚಾರ ಇಲ್ಲದಿರುವ ಕಾರಣದಿಂದಾಗಿ ಸಂಭವಿಸಬಹುದಾದ ದೊಡ್ಡ ಮಟ್ಟದ ಅಪಾಯ ತಪ್ಪಿದಂತಾಗಿದೆ.
ಜಿಲ್ಲೆಯ ವಿವಿಧ ಕಡೆ ಆಗಾಗ ಗುಡ್ಡ ಕುಸಿತ ಭೂಕುಸಿತ ಸಂಭವಿಸುತ್ತಿದ್ದು ನಿರಂತರವಾಗಿ ಸುರಿಯುತ್ತಿರುವ ಮಳೆಗಳಿಂದಾಗಿ ಜನತೆಯ ಭಯದಲ್ಲಿಯೇ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಗುಡ್ಡ ಕುಸಿತದಿಂದಾಗಿ ಬೃಹತ್ ಕಲ್ಲುಗಳು ರಸ್ತೆಯ ಪಕ್ಕ ಜಾರಿದೆ ಎನ್ನಲಾಗಿದೆ. ಸುರಕ್ಷತೆ ಕಾರಣದಿಂದ ರಸ್ತೆ ಎರಡು ಕಡೆ ಬ್ಯಾರಿಕೆಟ್ ಹಾಕಿದ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ಸಹ ನಡೆಸಿದ್ದಾರೆ ಎನ್ನಲಾಗಿದೆ.