ಅಂಕೋಲಾ: ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಯುವತಿಯೊಂದಿಗೆ ಬಲತ್ಕಾರವಾಗಿ ಲೈಂಗಿಕ ಸಂಪರ್ಕ ಬೆಳೆಸಿ ಆಕೆ ಗರ್ಭವತಿಯಾಗಲು ಕಾರಣನಾದ ಯುವಕನ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ನೊಂದ ಯುವತಿ ದೂರು ದಾಖಲಿಸಿದ್ದು ಅಂಕೋಲಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ತಾಲೂಕಿನ ಬೊಬ್ರವಾಡ ನಿವಾಸಿ ಆಟೋ ಚಾಲಕ ಸಂಜಯ ಅಶೋಕ ನಾಯ್ಕ ಎಂಬಾತ ಬಂಧಿತ ಆರೋಪಿಯಾಗಿದ್ದು ಈತ ಅಂಕೋಲಾ ತಾಲೂಕಿನ ಪರಿಶಿಷ್ಟ ಜಾತಿ ಯುವತಿಯೊಂದಿಗೆ ಸಲುಗೆ ಬೆಳೆಸಿ ಬಾಳೆಗುಳಿ ಬಳಿಯ ಹೋಟೆಲಿನಲ್ಲಿ ರೂಮ್ ಪಡೆದು ಬಲತ್ಕಾರವಾಗಿ ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದಲ್ಲದೇ ನಂತರವೂ ಅಲಗೇರಿ ಅರಣ್ಯ ಪ್ರದೇಶದಲ್ಲಿಯೂ ಮತ್ತೆ ಬಲತ್ಕಾರದಿಂದ ದೈಹಿಕ ಸಂಪರ್ಕ ಮಾಡಿದ್ದ ಎನ್ನಲಾಗಿದೆ.
ಯುವತಿಯನ್ನು ಮೂರು ವರ್ಷಗಳ ಕಾಲದಿಂದ ಪರಿಚಯ ಮಾಡಿಕೊಂಡು ಪ್ರೀತಿಸುವುದಾಗಿ ನಂಬಿಸಿದ ಆರೋಪಿತ 2021 ರ ಜುಲೈ 10 ರಂದು ಹೋಟೆಲ್ ಗೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ಅದಲ್ಲದೆ, ನಂತರದ ದಿನಗಳಲ್ಲಿಯೂ ಆರೋಪಿತನು ಯುವತಿಯನ್ನು ಬಾಳೇಗುಳಿ ಅಲಗೇರಿ ಕ್ರಾಸ್ ಬಳಿ ಇರುವ ಬೆಟ್ಟಕ್ಕೆ ತನ್ನ ಆಟೋದಲ್ಲಿ ಕರೆದುಕೊಂಡು ಹೋಗಿ ಗಿಡಗಂಟಿಗಳ ಪೊದೆಯಲ್ಲಿ ಸಂಪರ್ಕ ಬೆಳೆಸಿ ಆಕೆ ಗರ್ಭವತಿಯಾಗಲು ಕಾರಣನಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇದೀಗ ಗರ್ಭವತಿಯಾದ ಯುವತಿ ಇದನ್ನು ಆತನ ಗಮನಕ್ಕೆ ತಂದಾಗ ಅವಳಿಗೆ ಜೀವ ಬೆದರಿಕೆ ಹಾಕಿರುವುದಾಗಿ ತಿಳಿದು ಬಂದಿದೆ.