ಕಾರವಾರ: ರಸ್ತೆ ಬದಿ ಆಹಾರ ವಸ್ತು ವ್ಯಾಪಾರಸ್ಥರು ಆಹಾರ ತಯಾರಿಕೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುತ್ತಿಲ್ಲ ಎನ್ನುವ ದೂರುಗಳು ಕೇಳಿಬಂದ ಹಿನ್ನಲೆ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳು ನಗರದ ವಿವಿಧೆಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಮಂಗಳವಾರ ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿರುವ ಫುಡ್‌ಕೋರ್ಟ್ ಬಳಿ ಇರುವ ಚಾಟ್ಸ್, ಸಾಫ್ಟ್ ಡ್ರಿಂಕ್ಸ್ ವ್ಯಾಪಾರಸ್ಥರ ಅಂಗಡಿಗಳನ್ನ ಪರಿಶೀಲನೆ ನಡೆಸಿದರು.
ಕೆಲ ವ್ಯಾಪಾರಿಗಳು ದಿನಪತ್ರಿಕೆಗಳಲ್ಲಿ ಆಹಾರವನ್ನು ಪ್ಯಾಕ್ ಮಾಡಿ ಕೊಡುತ್ತಿರುವುದು ಕಂಡುಬಂದಿದೆ. ದಿನಪತ್ರಿಕೆ ಮುದ್ರಣದಲ್ಲಿ ಬಳಸುವ ಇಂಕ್‌ನಲ್ಲಿ ಅಪಾಯಕಾರಿ ಲೆಡ್ ರಾಸಾಯನಿಕ ಮಿಶ್ರಣವಾಗಿರುತ್ತದೆ. ಇದು ಕರಿದ ತಿಂಡಿಯಂತಹ ಆಹಾರ ವಸ್ತುಗಳ ಸಂಪರ್ಕದಲ್ಲಿ ಬರುವುದರಿಂದ ಆರೋಗ್ಯ ದುಷ್ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಹಾನಿಕಾರಕವಾಗಿದೆ. ಹೀಗಾಗಿ ಆಹಾರ ವಸ್ತುಗಳ ಪ್ಯಾಕಿಂಗ್‌ಗೆ ದಿನಪತ್ರಿಕೆ ಬಳಸದಂತೆ ಸೂಚನೆ ನೀಡಿದ್ದಾರೆ.
ಜೊತೆಗೆ ಕೆಲವರು ಪಾನೀಪುರಿಯಲ್ಲಿ ಬಳಸುವ ಬಣ್ಣ ಬಣ್ಣದ ನೀರಿಗೆ ರಾಸಾಯನಿಕ ಬಳಸಿ ರುಚಿಕರವಾಗಿಸುತ್ತಾರೆ ಎನ್ನುವ ಶಂಕೆ ವ್ಯಕ್ತವಾದ ಹಿನ್ನಲೆ ಅದರ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲು ಅವುಗಳ ಮಾದರಿಯನ್ನ ಸಹ ಸಂಗ್ರಹಿಸಲಾಗಿದೆ. ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ. ರಾಜಶೇಖರ, ಆಹಾರ ಸುರಕ್ಷತಾ ಅಧಿಕಾರಿ ಅರುಣ ಕಾಶಿ ಭಟ್ಟ ಇನ್ನಿತರರು ಹಾಜರಿದ್ದರು.