ಕಾರವಾರ: ಕಾಲಿಗೆರಗಿದ ಜಿಲ್ಲಾಧಿಕಾರಿ ತಲೆಯ ಮೇಲೆ ವೃದ್ಧೆ ಎರಡೂ ಕೈಯಿಟ್ಟು ಆಶೀರ್ವಾದ ಮಾಡುವ ಮೂಲಕ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು. ಹಿರಿಯರಿಗೆ ಗೌರವಿಸುವ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಸರಳತೆ ಹಾಗೂ ಕಾಲಿಗೆರಗಿದವರು ಯಾರೇ ಆದರೂ ಅವರನ್ನು ಆಶೀರ್ವದಿಸುವ 90 ವರ್ಷದ ರುಕ್ಕಾಬಾಯಿ ಶೆಟ್ಟಿ ಅವರ ನಡತೆ ಜನರನ್ನು ಬೆರಗಾಗಿಸಿತು. ಈ ಕಾರ್ಯಕ್ರಮಕ್ಕೆಂದು ಅಂಗಡಿಗೆ ತೆರಳಿದ್ದ ವೇಳೆ ಸಭಾಂಗಣದ ಎದುರಿಗಿದ್ದ ಅಜ್ಜಿಯ ಹೊಟೆಲ್ ಬಗ್ಗೆ ಸ್ಥಳೀಯರು, ಅಧಿಕಾರಿಗಳು ಹೇಳುತ್ತಿದ್ದಂತೆ ಡಿಸಿ ಅವರ ಮನೆಗೆ ತೆರಳಿದರು.
ಬಳಿಕ ರುಕ್ಕಾಬಾಯಿ ಅವರ ಕಾಲುಮುಟ್ಟಿ ನಮಸ್ಕರಿಸಿ ಸರಳತೆ ಮೆರೆದರು. ಮನೆಯಲ್ಲೇ ಇರುವ ಹೊಟೆಲ್‌ನಲ್ಲಿ 1779ರಿಂದ ಬಜ್ಜಿ ಶಂಕರಪೊಳೆ, ರವೆ ಉಂಡೆ, ಬುಂದಿಲಾಡು ಇತ್ಯಾದಿ ಖಾದ್ಯಗಳನ್ನು ತಯಾರಿಸುತ್ತಿದ್ದು, ಅಂದಿನಿಂದಲೂ ಅದೇ ರುಚಿರುಚಿ ಕಾಯ್ದುಕೊಂಡು ಬಂದಿದ್ದಾರೆ.
ಅಜ್ಜಿಯ ಕಾಯಕ ನಿಷ್ಠೆ ಕೇಳಿದ ಡಿಸಿ ಅಚ್ಚರಿಗೆ
ಒಳಗಾಗಿದ್ದರು. ಸದಾ ಸರಳತೆಯಿಂದಲೇ ಮುಲ್ಲೈ ಮುಗಿಲನ್ ಜನಾನುರಾಗಿಯಾಗಿದ್ದಾರೆ.
ಡಿ.ಸಿ ಸಂತಸದ ಮಾತು
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ನಿಮಿತ್ತ ನಿನ್ನೆ ಕಾರವಾರ ತಾಲೂಕಿನ ಅಂಗಡಿ ಗ್ರಾಮಕ್ಕೆ ಹೋದಾಗ ಗ್ರಾಮದ ಹಿರಿಯ ನಾಗರಿಕರೊಬ್ಬರು ಸ್ವಾತಂತ್ರ್ಯ ಪೂರ್ವದಿಂದಲೂ ಈ ಗ್ರಾಮದಲ್ಲಿ ಹೊಟೇಲ್ ನಡೆಸಿಕೊಂಡು ಬಂದಿರುತ್ತಾರೆ ಎಂದು ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಹೊಟೇಲ್‌ಗೆ ಭೇಟಿ ನೀಡಲಾಯಿತು. ಶ್ರೀಮತಿ ರುಕ್ಮಾಬಾಯಿ ವಿಠೋಬಾ ಶೇಟಿಯಾ ಅವರು ಕುಟುಂಬವು ಅಂದಾಜು 125 ವರ್ಷಗಳಿಂದ ಹೊಟೇಲನ್ನು ನಡೆಸಿಕೊಂಡು ಬಂದಿರುತ್ತಾರೆ.ನಿರಂತರವಾಗಿ ವೃತದಂತೆ ಈ ಪುಟ್ಟ ಹೊಟೆಲನ್ನು ಜತನದಿಂದ ನಡೆಸುತ್ತಿರುವ ಶ್ರೀಮತಿ ರುಕ್ಮಾಬಾಯಿ ವಿಠೋಬಾ ಶೇಟಿಯಾ ಅವರು 9೦ ಕ್ಕಿಂತಲೂ ಹೆಚ್ಚು ವಯಸ್ಸಿನವರಾಗಿದ್ದು, ಈ ವಯಸ್ಸಿನಲ್ಲೂ ಕೂಡಾ ಲವಲವಿಕೆಯಿಂದ ಹೊಟೇಲ್ ನಡೆಸುತ್ತಿರುವದು ಹೆಮ್ಮೆಯ ವಿಷಯ. ಯಾವುದೇ ಕೃತಕ ಸಾಧನಗಳನ್ನು ಬಳಸದೆ ತಯಾರಿಸಿದ ಸ್ಥಳೀಯ ತಿನಿಸುಗಳಾದ ಪಾವು ಬಾಜಿ, ಮಿಸಳ್ ಬಾಜಿ, ಶೇವು ಶೇಂಗಾ, ಶಂಕರ್ ಪೊಳೆ, ರವಾ ಲಾಡು, ಬುಂದಿ ಲಾಡುಗಳು ಸ್ವಾಧಿಷ್ಟವಾಗಿತ್ತು.
ಅನ್ನಪೂರ್ಣೆಯಂತಹ ಹಿರಿಯರಾದ ರುಕ್ಮಾಬಾಯಿ ಅಮ್ಮನ ಆಶೀರ್ವಾದ ಪಡೆಯಲಾಯಿತು.ಸ್ವಾತಂತ್ರ್ಯದ ಅಮೃತ ಮಹೋತ್ಸದ ಈ ಸಮಯದಲ್ಲಿ,ಸ್ವಾತಂತ್ರ್ಯ ಪೂರ್ವದಿಂದಲೂ ನಡೆದುಕೊಂಡ ಬಂದ ಹೊಟೇಲ್‌ಗೆ ಭೇಟಿ ನೀಡುವ ಅವಕಾಶ ಸಿಕ್ಕಿದ್ದು ಸಂತೋಷ ತಂದಿದೆ.