ಅಂಕೋಲಾ: ತಾಲೂಕಿನ ಬೆಳಂಬಾರ ಗ್ರಾ.ಪಂ ವ್ಯಾಪ್ತಿಯ ತಾಳೇಬೈಲಿನಲ್ಲಿ ರೇಶನ್ ಅಂಗಡಿಗೆ ಬಂದು ಪಡಿತರ ಧಾನ್ಯ ಪಡೆದು ಬಾಸಗೋಡಿನಿಂದ ಬೆಳಂಬಾರದತ್ತ ತೆರಳುತ್ತಿದ್ದ ಪ್ರಯಾಣಿಕರಿದ್ದ ಚಲಿಸುತ್ತಿದ್ದ ಆಟೋರಿಕ್ಷಾ ಒಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಂಚಿನ ತಗ್ಗು ಪ್ರದೇಶದಲ್ಲಿ ಪಲ್ಟಿಯಾಗಿ ನಾಲ್ವರು ಪ್ರಯಾಣಿಕರು ಗಾಯಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ.
ಗಾಯಗೊಂಡವರನ್ನು ಹಂದಿಗೋಣ ಮಜರೆಯವರು ಎಂದು ಗುರುತಿಸಲಾಗಿದೆ. ತಲೆಕೆಳಗಾದ ರಿಕ್ಷಾ ನುಜ್ಜು ಗುಜ್ಜಾಗಿದೆ. ಆದರೆ ಅದೃಷ್ಟ ವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.ಅಪಘಾತ ನಡೆದ ತಕ್ಷಣ ಗಾಯಳುಗಳನ್ನು 108 ಅಂಬುಲೆನ್ಸ್ ವಾಹನದ ಮೂಲಕ ತಾಲೂಕಾ ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು ನೆರವಾದರು.
ಎಡಗೈಗೆ ಗಂಭೀರ ಗಾಯಗೊಂಡ ನೇತ್ರಾವತಿ ಬೆಚ್ಚು ಗೌಡ ಇವಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆ ಕಾರವಾರಕ್ಕೆ ಸಾಗಿಸಲಾಗಿದ್ದರೆ, ಮೂಗು ಮತ್ತಿತರ ಭಾಗಗಳಿಗೆ ಗಾಯ ಗೊಂಡ ಸೀತಾ ಬೊಮ್ಮ ಗೌಡ ಇವಳಿಗೆ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ. ಚಿಕ್ಕ ಪುಟ್ಟ ಗಾಯಗಳಾದ ಪ್ರತಿಮಾ ರಾಕು ಗೌಡ ಮತ್ತು ಸೋಮಿ ರಾಮಾ ಗೌಡ ಇವರಿಗೆ ತಾಲೂಕಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ರಾತ್ರಿ ವೇಳೆಗೆ ಆಸ್ಪತ್ರೆಯಿಂದ ಬಿಡುಗಡೆ ಗೊಳಿಸಲಾಗಿದೆ.