ಹೊನ್ನಾವರ : ಸುಳ್ಳು ಹೇಳುವುದನ್ನೇ ಕರಗತ ಮಾಡಿಕೊಂಡಿರುವ ಬಿ.ಜೆ.ಪಿ.ಯವರು ನೂರು ಬಾರಿ ಸುಳ್ಳು ಹೇಳಿ, ಸುಳ್ಳನ್ನೇ ಸತ್ಯ ಮಾಡಲು ಹೋಗಿ ವಿಫಲರಾಗಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಂಯೋಜಕರು ಹಾಗೂ ಬ್ಲಾಕ್ ಕಾಂಗ್ರೆಸ್ ಚುನಾವಣಾ ಉಸ್ತುವಾರಿಗಳಾದ ರವಿಶಂಕರ ಶೇರಿಗಾರ್ ಹೇಳಿದರು. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಪ್ರಪಂಚವೇ ಮೆಚ್ಚಿ ಕೊಂಡಾಡಿದ, ಖ್ಯಾತ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಡಾ|| ಮನಮೋಹನ್ ಸಿಂಗ್ ಸರ್ಕಾರದ ಆಡಳಿತವನ್ನು ಸುಳ್ಳು ಆರೋಪಗಳಿಂದ ಟೀಕಿಸುತ್ತಿದ್ದ ಬಿ.ಜೆ.ಪಿ. ಇಂದು ತನ್ನ ಆಡಳಿತದಲ್ಲಿ ಮಾಡುತ್ತಿರುವುದೇನು? ಎಂದು ಪ್ರಶ್ನಿಸಿದರು. ಮನಮೋಹನ್ ಸಿಂಗ್ ನೇತೃತ್ವದ ಯು.ಪಿ.ಎ. ಸರ್ಕಾರ ಜ್ಯಾರಿಯಲ್ಲಿ ತಂದ ಜನಪ್ರೀಯ ಯೋಜನೆಗಳಾದ ನರೆಗಾ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಆಹಾರ ಭದ್ರತೆ ಯೋಜನೆ, ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆ, ಸರ್ವಶಿಕ್ಷಣ ಅಭಿಯಾನ ಎಲ್ಲವನ್ನು ಗಾಳಿಗೆ ತೂರಿ ಕಳೆದ ಎಂಟು ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಬಿ.ಜೆ.ಪಿ. ಸರ್ಕಾರ ಬರೇ ಸುಳ್ಳಿನಿಂದ ದೇಶ ನಡೆಸುತ್ತಿದೆ ಎಂದು ಖಾರವಾಗಿ ನುಡಿದರು. ೨೦೦೧ರ ಆಸುಪಾಸಿನಲ್ಲಿ ಮೋಬೈಲ್ ಬಳಕೆ ಮಾಡುವಾಗ ರೋಮಿಂಗ್ ಕರೆಗೂ ದರ ನಿಗದಿಪಡಿಸುತ್ತಿದ್ದ ಸರ್ಕಾರ, ೨೦೦೯ರ ಹೊತ್ತಿಗೆ ೨ಜಿ ತರಂಗಾAತರ ಜ್ಯಾರಿ ಮಾಡುವ ಮೂಲಕ ಅತೀ ಕಡಿಮೆ ದರದಲ್ಲಿ ಮೊಬೈಲ್ ಬಳಕೆದಾರರಿಗೆ ಅನುಕೂಲ ಮಾಡಿಕೊಟ್ಟ ಶ್ರೇಯಸ್ಸು ಡಾ|| ಮನಮೋಹನ್ ಸಿಂಗ್ ಸರ್ಕಾರಕ್ಕೆ ಸಲ್ಲುತ್ತದೆ ಎಂದರು. ಆದರೂ ವಿನಾಃ ಕಾರಣ ೨ಜಿ ಸ್ಪೆಕ್ಟçಮ್ ವಿತರಣೆಯನ್ನು ದೊಡ್ಡದು ಮಾಡಿ, ಸುಳ್ಳು ಆರೋಪಗಳ ಮೂಲಕ ಯು.ಪಿ.ಎ. ಸರ್ಕಾರಕ್ಕೆ ಕಳಂಕ ತರುವ ಕೆಲಸ ಮಾಡಿ, ಸರ್ಕಾರ ಪಥನಕ್ಕೂ ಬಿ.ಜೆ.ಪಿ. ನಾಂದಿ ಹಾಡಿತು ಎಂದರು.

RELATED ARTICLES  ಮಲಗುವ ಕೋಣೆಯ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ.

ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ಕಿಸಾನ್ ವಿಭಾಗದ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ರಾಜ್ಯದಲ್ಲಿ ಬೊಮ್ಮಾಯಿ ನೇತೃತ್ವದ ಬಿ.ಜೆ.ಪಿ. ಸರ್ಕಾರ ಜನತೆಗೆ ಉತ್ತಮ ಆಡಳಿತ ನೀಡಲು ವಿಫಲವಾಗಿದೆ ಎಂದರು. ರಾಜ್ಯದಲ್ಲಿ ಕೇವಲ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು, ಜನರಲ್ಲಿ ವಿಷಬೀಜ ಬಿತ್ತುವ ಕೆಲಸವನ್ನು ತಕ್ಷಣ ಬಿ.ಜೆ.ಪಿ. ಸರ್ಕಾರ ನಿಲ್ಲಿಸಬೇಕೆಂದು ಆಗ್ರಹಿಸಿದರು.

ಹೊನ್ನಾವರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಮಹೇಶ ಮಾತನಾಡಿ ಕೇಂದ್ರ ಮತ್ತು ರಾಜ್ಯದ ಬಿ.ಜೆ.ಪಿ. ಸರ್ಕಾರ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸುತ್ತಿದ್ದು, ಮಹಿಳೆಯವರು ಸಂಸಾರ ನಿಭಾಯಿಸುವುದು ಕಷ್ಟವಾಗಿದೆ ಎಂದರು. ಅಡಿಗೆ ಅನಿಲದ ಬೆಲೆ ೧,೫೦೦-೦೦ ಗಡಿ ದಾಟಿದ್ದು, ಅಡುಗೆ ಎಣ್ಣೆಗಳು ಕೈಗೆ ನಿಲುಕದಂತಾಗಿದೆ. ಹಾಲಿನ ಉತ್ಪನ್ನಗಳಾದ ಮಜ್ಜಿಗೆ, ಮೊಸರಿಗೂ ಜಿ.ಎಸ್.ಟಿ. ನಿಗದಿಪಡಿಸುವಂತಹ ಸರ್ಕಾರ ಇನ್ನೇನು ಉತ್ತಮ ಆಡಳಿತ ನೀಡಲು ಸಾಧ್ಯವೆಂದು ಹೇಳಿದರು.

RELATED ARTICLES  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಮಟಾವತಿಯಿಂದ ಮಿಷನ್ ಸಾಹಸಿ ಕರಾಟೆ ಪ್ರದರ್ಶನ.

ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಹೊನ್ನಾವರ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಿದ್ದು, ಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಎಲ್ಲಾ ಮುಖಂಡರು ಒಗ್ಗೂಡಿ ಕಾಂಗ್ರೆಸ್ ಪಕ್ಷದ ಪತಾಕಿಯನ್ನು ಹಾರಿಸುವುದು ಶತಸಿದ್ಧ ಎಂದರು. ಹೊನ್ನಾವರ ಬ್ಲಾಕ್ ಶಕ್ತಿ ವಿಭಾಗದ ಸಂಚಾಲಕರಾದ ಬಾಲಚಂದ್ರ ನಾಯ್ಕ ವಂದಿಸಿದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರವಿ ಶೆಟ್ಟಿ, ಕವಲಕ್ಕಿ, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಜಿಕ್ರಿಯಾ ಶೇಖ್, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣಾ ಹರಿಜನ, ಸೇವಾದಳ ವಿಭಾಗದ ಅಧ್ಯಕ್ಷ ಮೋಹನ ಆಚಾರಿ, ಇಂಟೇಕ್ ಅಧ್ಯಕ್ಷ ಆಗ್ನೇಲ್ ಡಯಾಸ್, ಸೇವಾದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಮಾರಿಮನೆ, ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಚಾರೋಡಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀಮತಿ ಮಮತಾ ಶೇಟ್, ಶ್ರೀಮತಿ ಆಶಾ ಮಡಿವಾಳ, ಜೋಸೇಫ್ ಡಿಸೋಜಾ, ನವೀನ್ ಡಿಸೋಜಾ, ಮನ್ಸೂರ್ ಶೇಖ್, ರಾಘವೇಂದ್ರ ಮೇಸ್ತ, ಗೀರೀಶ ಗೌಡ, ಗಣೇಶ ಆಚಾರಿ ಇನ್ನು ಮುಂತಾದವರು ಉಪಸ್ಥಿತರಿದ್ದರು.