ಬೆಂಗಳೂರು: “ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ “ಮೀಟರ್ ಇಲ್ಲ’ ಎಂಬ ಪದ ಬಳಕೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲು ತಮಗೆ ಮೀಟರ್ ಇದೆಯೇ ಎಂಬುದನ್ನು ಅರಿತುಕೊಳ್ಳಲಿ’ ಎಂದು ಬಿಜೆಪಿ ರಾಜ್ಯ ವಕ್ತಾರ ಹಾಗೂ ಶಾಸಕ ಎಸ್.ಸುರೇಶಕುಮಾರ್ ಟೀಕಿಸಿದ್ದಾರೆ.
“ಮೀಟರ್ ಎಂಬುದು ಭೂಗತ ಜಗತ್ತಿನಲ್ಲಿ, ರೌಡಿಗಳ ಸಾಮ್ರಾಜ್ಯದಲ್ಲಿ ಪ್ರಚಲಿತವಾಗಿರುವ ಪದ. ಮುಖ್ಯಮಂತ್ರಿಯಂತಹ ಗೌರವಯುತ ಸ್ಥಾನದಲ್ಲಿರುವವರು ಅದನ್ನು ಬಳಸಬಾರದಿತ್ತು. ಆದರೆ, ಸಿದ್ದರಾಮಯ್ಯ ಭೂಗತ ಜಗತ್ತಿನ ಶಬ್ದವನ್ನು ಬಳಸಿಕೊಳ್ಳುವ ಮೂಲಕ ಸಮಾಜಕ್ಕೆ ಕೆಟ್ಟ ಉದಾಹರಣೆಯಾಗುವತ್ತ ಹೆಜ್ಜೆ ಇಟ್ಟಿದ್ದಾರೆ. ಜನರ ಚಪ್ಪಾಳೆ ಗಿಟ್ಟಿಸಲು ಹೋಗಿ ಸಣ್ಣವರಾಗಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸುರೇಶ್‌ಕುಮಾರ್, ಮೀಟರ್ ಪದವನ್ನು ಯಾರ ಬಗ್ಗೆಯೂ ನಾನು ಬಳಸುವುದಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಗತ್ಯ ಪ್ರತಿಕ್ರಿಯೆ ಕೊಡಬೇಕಾಗಿರುವುದರಿಂದ ಆ ಪದವನ್ನು ಅನಿವಾರ್ಯವಾಗಿ ಬಳಸಬೇಕಾಗಿದೆ. ಯಡಿಯೂರಪ್ಪ ಅವರಿಗೆ ಮೀಟರ್ ಇಲ್ಲ ಎಂದು ನಡತೆ ಪ್ರಮಾಣಪತ್ರ ಕೊಟ್ಟಿರುವ ಅವರಿಗೆ ಅದು ಇದೆಯೇ? ಒಬ್ಬ ಮುಖ್ಯಮಂತ್ರಿಯಾಗಿ ಅವರ ಪಕ್ಷದ ಅಧ್ಯಕ್ಷೆ, ಉಪಾಧ್ಯಕ್ಷರ ಭೇಟಿಗೆ ಅವಕಾಶ ಕೇಳುವ ಮೀಟರ್ ಇದೆ ಎಂದು ಎಂದಿಗೂ ರುಜುವಾತು ಪಡಿಸಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.