ಯಲ್ಲಾಪುರ : ತಾಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಮಾವಿನಕಟ್ಟಾ ಸುತ್ತಮುತ್ತ ಚಿರತೆ ಓಡಾಟ ಮುಂದುವರಿದಿದ್ದು, ಮೇಯಲು ಹೋದ ಹಸುವೊಂದನ್ನು ಚಿರತೆ ಕೊಂದಿರುವುದು ಪತ್ತೆಯಾಗಿದೆ. ಮೇಯಲು ಹೋದ ಹಸುವನ್ನು ಚಿರತೆ ಕೊಂದಿದ್ದು, ಮಾವಿನಕಟ್ಟಾ ಸಮೀಪದ ಕಾಡಿನಲ್ಲಿ ಹಸುವಿನ ಕಳೇಬರ ಪತ್ತೆಯಾಗಿದೆ.
ಇದರಿಂದ ಮಾವಿನಕಟ್ಟಾ,ಗೌಡ್ತಿಕೊಪ್ಪ, ಭರಣಿ ಸುತ್ತಮುತ್ತಲಿನ ರೈತರು ದನಕರುಗಳನ್ನು ಮೇಯಲು ಕಾಡಿಗೆ ಬಿಡುವುದಕ್ಕೂ ಭಯಪಡುವಂತಾಗಿದೆ. ಕಳೆದ 8-10 ದಿನಗಳಿಂದ ಚಿರತೆ ಓಡಾಡುತ್ತಿದ್ದು, ಹಗಲು ಹೊತ್ತಿನಲ್ಲೂ ಕಾಣಿಸಿಕೊಂಡು ಆತಂಕ ಮೂಡಿಸುತ್ತಿದೆ.ಈ ಕುರಿತು ಸ್ಥಳೀಯರ ದೂರಿನ ಮೇರೆ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಂಬಿಂಗ್ ಕಾರ್ಯಾಚರಣೆ ನಡೆಸಿ, ಚಿರತೆ ಓಡಿಸುವ ಪ್ರಯತ್ನ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಚಿರತೆಯ ದಾಳಿ ಮುಂದುವರಿದಿದ್ದು, ಆತಂಕ ಹೆಚ್ಚುವಂತೆ ಮಾಡಿದೆ. ಯಾವ ಸಂದರ್ಭದಲ್ಲಿ ಏನಾಗುವುದೋ ಎಂಬ ಭಯ ಜನತೆಯನ್ನು ಕಾಡುತ್ತಿದ್ದು ಸುತ್ತಮುತ್ತಲ ಜನರು ಸಹ ಭಯದಲ್ಲಿಯೇ ಬದುಕುವ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎನ್ನುವುದು ಜನರ ಅಹವಾಲಾಗಿದೆ.