ಗೋಕರ್ಣ: ದಮ, ದಾನ ಮತ್ತು ದಯೆ ಎಂಬ ದ ತ್ರಯಗಳು ಜೀವನ ಸಾರ್ಥಕತೆಗೆ ಅನಿವಾರ್ಯ. ಪ್ರಜಾಪತಿಯಾದ ಬ್ರಹ್ಮದೇವ ನ ಉಪದೇಶದಂತೆ ನಮ್ಮಲ್ಲಿ ಈ ಮೂರು ಗುಣಗಳ ಪೈಕಿ ಯಾವುದರ ಕೊರತೆ ಇದೆಯೋ ಅದನ್ನು ಮೈಗೂಡಿಸಿಕೊಳ್ಳುವ ಪ್ರಯತ್ನ ಮಾಡುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗೋಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಶನಿವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಮನುಷ್ಯರಲ್ಲೇ ದೇವ, ಮನುಜ ಮತ್ತು ದಾನವ ಗುಣದ ಮೂರು ವರ್ಗದವರಿರುತ್ತಾರೆ. ನಮ್ಮಲ್ಲಿ ಯಾವ ಗುಣಗಳ ಕೊರತೆ ಇದೆಯೋ ಅದನ್ನು ಕಂಡುಕೊಂಡು ಅದನ್ನು ಬೆಳೆಸಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಸಲಹೆ ಮಾಡಿದರು. ಸಲ್ಲದ ಕಾಮ, ಸಲ್ಲದ ಕ್ರೋಧ, ಸಲ್ಲದ ಲೋಭವನ್ನು ತ್ಯಜಿಸಬೇಕು ಎನ್ನುವುದು ಪ್ರಜಾಪತಿಯ ಉಪದೇಶ ಎಂದು ತಿಳಿಸಿದರು.

ಬೃಹದಾರಣ್ಯಕೋಪನಿಷತ್‍ನಲ್ಲಿ ಜಗತ್ತಿನ ಆದಿ ಗುರುಕುಲದ ಬಗ್ಗೆ ಪ್ರಸ್ತಾಪ ಇದ್ದು, ಸೃಷ್ಟಿಕರ್ತ ಬ್ರಹ್ಮದೇವನೇ ಗುರು. ಆಗಿನ ಕಾಲದ ಮನುಷ್ಯ, ದೇವತೆಗಳು ಮತ್ತು ಅಸುರರು ಅಲ್ಲಿ ಶಿಷ್ಯರು. ಬ್ರಹ್ಮಚರ್ಯ ವ್ರತ ಪಾಲನೆ ಮಾಡಿ ಅಲ್ಲಿ ಶಿಷ್ಯರು ಅಧ್ಯಯನ ಮಾಡುತ್ತಾರೆ. ಕೇವಲ ಶುಭ ಅಂದರೆ ದೇವತೆಗಳು, ಕೇವಲ ಅಶುಭ ಅಂದರೆ ಅಸುರರು ಇವೆರಡರ ಸಂಗಮವಾದ ಮನುಷ್ಯರು ಹೀಗೆ ಮೂರು ವರ್ಗದ ಜನ ಅಧ್ಯಯನ ಮಾಡುತ್ತಿದ್ದರು ಎಂದು ಉಲ್ಲೇಖಿಸಿದರು.
ಬ್ರಹ್ಮಚರ್ಯ ಪರಿಪಾಲನೆ ಆಗಿರುವುದು ದೇವತೆಗಳಿಂದ. ಪ್ರಜಾಪತಿ ಕಲಿಸಿಕೊಟ್ಟದ್ದು ದ ಎಂಬ ಒಂದಕ್ಷರ ಮಾತ್ರ. ದೇವತೆಗಳು ಇದರಿಂದ ಒಂದು ಶಬ್ದ ಕಲಿತರು. ದಾಮ್ಯತಾ (ದಮ) ಎಂಬ ಅರ್ಥವಲ್ಲವೇ ಎಂದು ದೇವತೆಗಳು ಬ್ರಹ್ಮದೇವನನ್ನು ಪ್ರಶ್ನಿಸುತ್ತಾರೆ. ದಾಮ್ಯತಾ ಎಂದರೆ ಇಂದ್ರಿಯಗಳ ನಿಗ್ರಹ ಎಂಬ ಅರ್ಥ. ಇಂದ್ರಿಯಗಳು ನಮ್ಮ ನಿಯಂತ್ರಣದಲ್ಲಿರಬೇಕು. ಕೆಟ್ಟ ಕೆಲಸ ಮಾಡಲು ಮುಂದಾಗುವ ಇಂದ್ರಿಯ ಮನಸ್ಸುಗಳನ್ನು ನಿಗ್ರಹಿಸುವುದು ದಮ ಎಂಬ ಉಲ್ಲೇಖ ಪದ್ಮಪುರಾಣದಲ್ಲಿದೆ ಎಂದು ವಿವರಿಸಿದರು.

RELATED ARTICLES  ಮಹಿಳೆಯ ಹೊಟ್ಟೆಯಲ್ಲಿತ್ತು 5 ಕೆ.ಜಿ ಗಡ್ಡೆ : ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು.

ಸ್ವರ್ಗ ಸುಖಕ್ಕಿಂತ ಮಿಗಿಲಾದ ಮುಕ್ತಿಸುಖ ಎನ್ನುವುದಿದೆ. ಇಂದ್ರಿಯ ನಿಗ್ರಹದ ಮೂಲಕ ಇದನ್ನು ಸಾಧಿಸುವಂತೆ ಬ್ರಹ್ಮದೇವ ಉಪದೇಶ ಮಾಡಿದ್ದಾನೆ ಎಂದು ಅಭಿಪ್ರಾಯಪಟ್ಟರು.

ನಮ್ಮ ಪೂರ್ವಜರಿಗೆ ಅಂದರೆ ಮನುಜರಿಗೆ ಕೂಡಾ ಬ್ರಹ್ಮನ ಉಪದೇಶ ‘ದ’ ಎಂಬ ಅಕ್ಷರವೇ ಆಗಿದೆ. ದ ಎಂದರೆ ದತ್ತ ಎಂಬುದಾಗಿ ಮನುಷ್ಯರು ಇದನ್ನು ಅರ್ಥೈಸಿಕೊಂಡರು. ದಾನ ಮಾಡಿ, ಲೋಭ ಮಾಡಬೇಡಿ ಎಂದು ಮನುಷ್ಯರು ಇದನ್ನು ವಿಶ್ಲೇಷಿಸಿದರು. ಉಣಲು, ಉಡಲು ಮತ್ತು ಜೀವಿಸಲು ಮಾತ್ರ ಬೇಕಾದಷ್ಟು ಪಡೆದುಕೊಂಡು ಉಳಿದದ್ದನ್ನು ದಾನ ಮಾಡಬೇಕು ಎಂಬುದು ಬ್ರಹ್ಮನ ಉಪದೇಶ ಎಂಬುದಾಗಿ ಅರ್ಥ ಮಾಡಿಕೊಂಡರು ಎಂದು ಬಣ್ಣಿಸಿದರು.

RELATED ARTICLES  ಶಿಕ್ಷಣ ಸಾರಥಿ ಪ್ರಶಸ್ತಿಗೆ ಭಾಸ್ಕರ ಮಡಿವಾಳ ಆಯ್ಕೆ.

ಬ್ರಹ್ಮ ದಾನವರಿಗೂ ‘ದ’ ಎಂಬುದನ್ನೇ ಬೋಧಿಸುತ್ತಾನೆ. ರಾಕ್ಷಸರು ಇದನ್ನು ದಯೆ ಎಂದು ಅರ್ಥ ಮಾಡಿಕೊಂಡರು. ಕ್ರೂರಿಗಳಾಗಿ ಇನ್ನೊಬ್ಬರನ್ನು ಪೀಡಿಸಬೇಡಿ ಎಂದು ಅರ್ಥೈಸಿಕೊಂಡರು. ಇಂದಿಗೂ ಮೂರೂ ಜೀವ ಪ್ರಬೇಧಗಳ ಮಂದಿ ಇದನ್ನು ಕಲಿಯುತ್ತಲೇ ಇದ್ದಾರೆ. ಮನುಷ್ಯರು ಇನ್ನೂ ಲೋಭ ಮಾಡುತ್ತಾ ಮುಂದುವರಿದರೆ, ರಾಕ್ಷಸರು ಕ್ರೂರ ಪ್ರವೃತ್ತಿಯನ್ನು ಮುಂದುವರಿಸಿದ್ದಾರೆ ಎಂದು ವಿಶ್ಲೇಷಿಸಿದರು.
ಮನುಷ್ಯರು ಹಾಗೂ ದಾನವರಿಗೆ ಈ ವಿದ್ಯಾಭ್ಯಾಸ ಪೂರ್ಣವಾಗದೇ ಇರುವುದರಿಂದ ಬ್ರಹ್ಮದೇವ ಮೇಘ, ಮೋಡ ಅಥವಾ ಗುಡುಗಿನ ರೂಪದಲ್ಲಿ ಇದನ್ನೇ ಬೋಧಿಸುತ್ತಿದ್ದಾನೆ ಎಂಬ ಉಲ್ಲೇಖ ಬೃಹದಾರಣ್ಯಕದಲ್ಲಿ ಇದೆ. ಕೂಡಿ ಬಾಳು, ಹಂಚಿ ತಿನ್ನು, ಅರ್ಹರಾದವರಿಗೆ ದಾನ ಮಾಡದೇ ಇದ್ದರೆ ಅದು ದೋಷವಾಗಿ ಪರಿಣಮಿಸುತ್ತದೆ ಎನ್ನುವುದನ್ನು ಪ್ರಜಾಪತಿ ತನ್ನ ಪ್ರಥಮ ಉಪದೇಶದಲ್ಲೇ ಹೇಳಿದ್ದಾನೆ ಎಂದರು.

ಧಾರ್ಮಿಕ ಕಾರ್ಯಕ್ರಮ ಅಂಗವಾಗಿ ಸಾಮವೇದ ಪಾರಾಯಣ, ರುದ್ರಹವನ, ರಾಮತಾರಕ ಹವನ, ಚಂಡೀ ಪಾರಾಯಣ, ಗಣಪತಿ ಹವನ, ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪುತ್ತೂರಿನ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ವತಿಯಿಂದ ವಿದ್ವಾನ್ ದೀಪಕ್ ಕುಮಾರ್ ಸಾರಥ್ಯದಲ್ಲಿ ಭರತನಾಟ್ಯ, ರಾಮಾಯಣ ನೃತ್ಯ ರೂಪಕ ನಡೆಯಿತು.