ನವದೆಹಲಿ: ಭಾರತ–ಮ್ಯಾನ್ಮಾರ್ ಗಡಿಯಲ್ಲಿ ಭಾರತೀಯ ಸೇನೆ ನಾಗಾ ಬಂಡುಕೋರರ ಮೇಲೆ ಬುಧವಾರ ತೀವ್ರ ಗುಂಡಿನ ದಾಳಿ ನಡೆಸಿದೆ ಎಂದು ಸೇನೆಯ ಪೂರ್ವ ಕಮಾಂಡ್ ತಿಳಿಸಿದ್ದಾರೆ.
ಗುಂಡಿನ ದಾಳಿಯಲ್ಲಿ ನಾಗಾಲ್ಯಾಂಡ್ ರಾಷ್ಟ್ರೀಯವಾದಿ, ಸಮಾಜವಾದಿ ಸಂಘಟನೆ (ಎನ್‌ಎಸ್‌ಸಿಎನ್–ಖಾಪ್ಲಾಂಗ್) ವಲಯದಲ್ಲಿ ಹೆಚ್ಚು ಸಾವು–ನೋವು ಸಂಭವಿಸಿದೆ. ಆದರೆ ಯಾವುದೇ ಯೋಧರು ಹುತಾತ್ಮರಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇಂದು ಬೆಳಗಿನ ಜಾವ 4:45ಕ್ಕೆ ಭಾರತ–ಮ್ಯಾನ್ಮಾರ್ ಗಡಿಯಲ್ಲಿ ಗುಂಡಿನ ಚಕಮಕಿ ನಡೆದಿದೆ. ಈ ದಾಳಿಯಲ್ಲಿ ಭಾರತೀಯ ಸೇನೆಯ ಯಾವುದೇ ಸಿಬ್ಬಂದಿ ಮೃತಪಟ್ಟಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಲ್ಲದೆ ಇದು ಸರ್ಜಿಕಲ್ ಸ್ಟ್ರೈಕ್ ಅಲ್ಲ ಎಂದು ಸ್ಪಷ್ಟಪಡಿಸಿದೆ.
ಗಡಿ ಭಾಗದಲ್ಲಿ ಭದ್ರತಾ ಪಡೆಯ ಮೇಲೆ ಗುರುತು ಸಿಗದ ಬಂಡುಕೋರರ ತಂಡ ಗುಂಡಿನ ದಾಳಿಗೆ ಮುಂದಾಗಿತ್ತು. ಭದ್ರತಾ ಪಡೆಯು ಪ್ರತಿ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಸೇನೆ ಅಂತರರಾಷ್ಟ್ರೀಯ ಗಡಿ ದಾಟಿಲ್ಲ ಎಂದು ಘಟನೆಯ ಕುರಿತು ಪೂರ್ವ ಕಮಾಂಡ್ ಮತ್ತೊಂದು ಟ್ವೀಟ್ ಮಾಡಿದೆ.