ಬೆಂಗಳೂರು : ಇನ್ನೇನು ಗಣೇಶ ಚತುರ್ಥಿ ಸಮೀಪಿಸುತ್ತಿದೆ, ಕಳೆದೆರಡು ವರ್ಷಗಳಿಂದ ಕರೋನಾ ಕಾಟದಿಂದಾಗಿ ಗಣೇಶೋತ್ಸವ ಸಪ್ಪೆಯಾಗಿತ್ತು, ಆದರೆ ಇದೀಗ ಹವಾಮಾನ ವರದಿ ಗಣೇಶೋತ್ಸವಕ್ಕೆ ಮಳೆಯ ಕಾಟ ಎಂದು ತಿಳಿಸುತ್ತಿದೆ. ಹವಾಮಾನದಲ್ಲಿ ಉಂಟಾದ ವೈಪರಿತ್ಯಗಳಿಂದ ಕರ್ನಾಟಕದ ಎಲ್ಲ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಸೆಪ್ಟಂಬರ್ 2ರವರೆಗೆ ಸಾಧಾರಣದಿಂದ ಭಾರಿ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರ ಮುನ್ಸೂಚನೆ ನೀಡಿದೆ.
ನೆರೆ ರಾಜ್ಯವಾದ ಆಂಧ್ರ ಪ್ರದೇಶದ ಕರಾವಳಿಯಲ್ಲಿ, ಬಂಗಾಳಕೊಲ್ಲಿ ಸಮುದ್ರದ ಮಧ್ಯದಲ್ಲಿ ಭಾಗ ಹಾಗೂ ಕೇರಳದದ ಸಮುದ್ರ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿದೆ.
ಇದರ ತೀವ್ರತೆ ಭಾನುವಾರಕ್ಕೆ ಹೆಚ್ಚಾಗಿದ್ದು, ಹೀಗೆ ಮುಂದಿನ ಐದು ದಿನ ಅದರ ತೀವ್ರತೆ ಮುಂದುವರಿಯುವ ಲಕ್ಷಣಗಳು ಇವೆ. ಈ ಕಾರಣಕ್ಕೆ ಕರ್ನಾಟಕದಾದ್ಯಂತ ಮಳೆ ಅಬ್ಬರ ಪುನಃ ಆರಂಭವಾಗಿದೆ.
ಕರ್ನಾಟಕದ ಕರಾವಳಿ ಭಾಗ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗಾ, ಕೋಲಾರ, ಚಿಕ್ಕಮಗಳೂರು, ಶಿವಮೊಗ್ಗ, ರಾಮನಗರ ಸೇರಿದಂತೆ ಬಹುತೇಕ ಎಲ್ಲ ಕಡೆಗಳಲ್ಲಿ ಮುಂದಿನ ಮೂರು ಜೋರು ಮಳೆ ಅಬ್ಬರಿಸಲಿದೆ. ನಂತರ ಸ್ವಲ್ಪ ಪ್ರಮಾಣದಲ್ಲಿ ಮಳೆ ಕಡಿಯಾಗಲಿದೆ. ಹೀಗಾಗಿ ಇಷ್ಟು ಜಿಲ್ಲೆಗಳಿಗೆ ಸೆ.1ರವರೆಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ.
ಇನ್ನೂ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳ ಹಲವೆಡೆ ಭಾನುವಾರದಿಂದ ಮೂರು ದಿನ ಮಳೆ ಅಬ್ಬರಿಸಲಿದೆ. ಇವುಗಳಿಗೆ ಮೂರು ದಿನ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಉಳಿದ ದಿನಗಳಲ್ಲಿ ಇದೇ ಭಾಗದಲ್ಲಿ ಹಗುರದಿಂದ ಸಾಧಾರಣ ಮಳೆ ಬೀಳಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.