ಶಿರಸಿ : ಬಾಯಲ್ಲಿ ಯಾವುದೋ ಒಂದು ವಸ್ತು ಸಿಲುಕಿ 8 ದಿನಗಳಿಂದ ಆಹಾರ ಇಲ್ಲದೇ ನಿತ್ರಾಣಗೊಂಡು ಬಿದ್ದಿದ್ದ ಬೃಹತ್ ಕಾಳಿಂಗ ಸರ್ಪವನ್ನು ಶಿರಸಿಯಲ್ಲಿ ರಕ್ಷಿಸಲಾಗಿದೆ. ಶಿರಸಿ ತಾಲೂಕಿನ ಮುರೇಗಾರ ಗ್ರಾಮದ ಮಾದಲಕೋಣೆಯ ಗಣೇಶ ಹೆಗಡೆ ಎಂಬುವರಿಗೆ ಸೇರಿದ ಕೃಷಿ ಜಮೀನಿನಲ್ಲಿ ಕಾಳಿಂಗ ಸರ್ಪ ವನ್ನು ರಕ್ಷಣೆ ಮಾಡಲಾಗಿದೆ.
ಸುಮಾರು ೧೧ ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಇದಾಗಿದೆ. ಕೃಷಿ ಜಮೀನಿನಲ್ಲಿ ಕೆಲಸಕ್ಕೆ ಹೋದ ಕೂಲಿಗಾರರು ಕಾಲುವೆಯ ಮಧ್ಯದಲ್ಲಿ ಬಿದ್ದುಕೊಂಡಿದ್ದ ಕಾಳಿಂಗದ ಬಗ್ಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಉರಗ ತಜ್ಞ ಪ್ರಶಾಂತ ಹುಲೇಕಲ್ ಸ್ಥಳಕ್ಕೆ ಆಗಮಿಸಿ ಹಾವಿನ ರಕ್ಷಣೆ ಮಾಡಿದ್ದಾರೆ. ಅನೇಕ ಸಂದರ್ಭಗಳಲ್ಲಿ ಕಾಡಿನಿಂದ ಹಾವುಗಳು ನಾಡಿಗೆ ಬರುವುದು ಸಹಜ. ಈ ಹಾವು ಬಾಯಲ್ಲಿ ವಸ್ತುವನ್ನ ಸಿಲುಕಿಸಿಕೊಂಡು 8 ದಿನದಿಂದ ಆಹಾರ ಸೇವಿಸದೆ ನಿತ್ರಾಣಗೊಂಡಿದೆ. ಇದನ್ನು ಹಿಡಿದು ಕಾಡಿಗೆ ಬಿಡಲಾಗುವುದು. ಎಂದು ಉರಗತಜ್ಞ ಮಾಹಿತಿ ನೀಡಿದ್ದಾರೆ.