ಕುಮಟಾ: “ಶಿಕ್ಷಣವು ಮನುಷ್ಯನಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿ, ಸಹನಶೀಲ ಗುಣಗಳನ್ನು ಬೆಳೆಸುತ್ತಿವೆ. ತ್ಯಾಗ ಮೌಲಿಕ ಪರಿಕಲ್ಪನೆ ಸ್ವಾರ್ಥವನ್ನು ಮರೆತು ಪರರ ಉಪಕಾರಕ್ಕೆ ಮುಂದಾಗಬೇಕು. ಶರೀರ ಸ್ವಾರ್ಥಕವಾಗುವುದು ಪರೋಪಕಾರದಿಂದಲೇ ಎಂಬಂತೆ ನಮ್ಮ ಲಾಯನ್ಸ್ ಕ್ಲಬ್ ಅಂಕೋಲಾ ಕರಾವಳಿ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳು ಸೇವಾ ಮನೋಭಾವನೆಯ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಅಂಕೋಲ ಲಾಯನ್ಸ್ ಕ್ಲಬ್ ಅಧ್ಯಕ್ಷರಾದ ಗಣೇಶ ಶೆಟ್ಟಿ ನುಡಿದರು.
ಇವರು ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತ್ತಿ ಹಾಗೂ ಲಾಯನ್ಸ್ ಕ್ಲಬ್ ಕರಾವಳಿ ಅಂಕೋಲಾ ಇವರ ಸಂಯುಕ್ತಾಶ್ರಯದಲ್ಲಿ ಹಿರೇಗುತ್ತಿ ಹೈಸ್ಕೂಲಿನಲ್ಲಿ ನಡೆದ ದಿ. ಶ್ರೀ ಹೇರಂಬಾ ಎಚ್.ಎಮ್ ಸ್ಮರಣಾರ್ಥ ಡಾ. ರಕ್ಷಿತಾ ಎಮ್. ಎಚ್ ಕೊಡುಗೆ ನೀಡಿದ ವಾಟರ್ ಫಿಲ್ಟರ್ ಉದ್ಘಾಟಿಸಿ ಮಾತನಾಡಿದರು. “ಸೇವೆಯ ಪ್ರತಿಫಲ ಸೇವೆ” ಎಂಬಂತೆ ನಮ್ಮ ಲಾಯನ್ಸ್ ಕ್ಲಬ್ ಪ್ರೇರಣೆಯಿಂದ ವಾಟರ್ ಫಿಲ್ಟರ್ ನೀಡಿದ್ದಾರೆ. ಇದರ ಪ್ರಯೋಜನ ವಿದ್ಯಾರ್ಥಿಗಳಿಗೆ ಆಗಲಿ ಎಂದರು.
ಲಾಯನ್ ಎಮ್.ಎಮ್.ರೇವಡಿ ಮಾತನಾಡಿ ಸೇವಾ ಮನೋಭಾವನೆಯ ಮುಖಾಂತರ ನಮ್ಮ ಲಾಯನ್ಸ್ ಕ್ಲಬ್ ಕಾರ್ಯ ನಿರ್ವಹಿಸುತ್ತಿದೆ. ದಿನಕರ ದೇಸಾಯಿಯವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಸೇವೆಯನ್ನು ಸ್ಮರಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಎನ್ ರಾಮು ಹಿರೇಗುತ್ತಿ “ಪರೋಪಕಾರಾರ್ಥಂ ಇದಂ ಶರೀರಂ” ಎಂಬಂತೆ ಅಂಕೋಲಾ ಲಾಯನ್ಸ್ ಕ್ಲಬ್ ಹತ್ತು-ಹಲವು ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಉತ್ತರ ಕನ್ನಡ ಜಿಲ್ಲೆಯನ್ನು ಸದಾ ಸಕ್ರೀಯವಾಗಿಸುವಲ್ಲಿ ಕಾರ್ಯತತ್ಪರವಾಗಿದೆ. ವಾಟರ್ ಫಿಲ್ಟರ್ ನೀಡಿದ ಡಾ. ಕರುಣಾಕರನ್ ನಾಯ್ಕ ದಂಪತಿಗಳಿಗೆ ಧನ್ಯವಾದ ಸಮರ್ಪಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹೈಸ್ಕೂಲ್ ಮುಖ್ಯಾಧ್ಯಾಪಕ ಶ್ರೀ ರೋಹಿದಾಸ ಎಸ್ ಗಾಂವಕರ ರವರು “ನಿರಂತರ ಓದು ಮತ್ತು ಕ್ರೀಯಾಶೀಲತೆಯಿಂದ ಮಾತ್ರ ಸಾಧನೆ ಸಾಧ್ಯ. ನಮ್ಮ ಶಾಲೆಯ ವಿದ್ಯಾರ್ಥಿಗಳು ಪ್ರತಿಭಾ ಸಂಪನ್ನ ಮಕ್ಕಳಾಗಿದ್ದಾರೆ. ವಿದ್ಯಾರ್ಥಿ ಜೀವನದಿಂದಲೇ ಸಮಾಜದಲ್ಲಿನ ಸತ್ಕಾರ್ಯದಲ್ಲಿ ಪಾಲ್ಗೊಳ್ಳುವ ಮನೋಭಾವ ರೂಢಿಸಿಕೊಳ್ಳಬೇಕೆಂದರು”.
ಕಾರ್ಯಕ್ರಮ ವೇದಿಕೆಯಲ್ಲಿ ಲಾಯನ್ಸ್ ಕ್ಲಬ್‌ನ ಹಸನ ಶೇಖ್, ಎಸ್. ಆರ್. ಉಡುಪಿ, ಶಂಕರ ಹುಲಸ್ವಾರ, ಮಂಜುನಾಥ ನಾಯಕ, ಚಂದನ ಸಿಂಗ್ ಹಾಗೂ ಶಿಕ್ಷಕರಾದ ಬಾಲಚಂದ್ರ ಹೆಗಡೇಕರ, ವಿಶ್ವನಾಥ ಬೇವಿನಕಟ್ಟಿ, ನಾಗರಾಜ ನಾಯಕ, ಜಾನಕಿ ಗೊಂಡ, ಮಹಾದೇವ ಗೌಡ, ಬಾಲಚಂದ್ರ ಅಡಿಗೋಣ, ಇಂದಿರಾ ನಾಯಕ, ಶಿಲ್ಪಾ ನಾಯಕ, ಕವಿತಾ ಅಂಬಿಗ. ಮದನ ನಾಯಕ, ಬಿ.ಇಡಿ ಪ್ರಶಿಕ್ಷಣಾರ್ಥಿಗಳಾದ ವಿದ್ಯಾಧರ ನಾಯಕ, ಮಹಿಮಾ ಗೌಡ ಹಾಗೂ ಪಾರ್ವತಿ ಹಳ್ಳೇರ ಉಪಸ್ಥಿತರಿದ್ದರು.
ಕಾರ್ಯಕ್ರಮ ನಾಗಶ್ರೀ ಸಂಗಡಿಗರೊಂದಿಗೆ ಆರಂಭವಾಯಿತು. ವಿದ್ಯಾರ್ಥಿ ಪ್ರತಿನಿಧಿ ಎಮ್.ಜಿ ನಾಗಭೂಷಣ ಸರ್ವರನ್ನೂ ಸ್ವಾಗತಿಸಿದರು. ಕಾಂಚಿಕಾ ನಾಯಕ ಕಾರ್ಯಕ್ರಮ ನಿರೂಪಣೆ ಮಾಡಿದರು. ವಿಜೇತ ಗುನಗ ವಂದಿಸಿದರು. ಗೋಪಾಲಕೃಷ್ಣ ಗುನಗಾ, ಗೋವಿಂದ ನಾಯ್ಕ ಸಹಕರಿಸಿದರು.
ವರದಿ : ಎನ್ ರಾಮು ಹಿರೇಗುತ್ತಿ