ಕಾರವಾರ: ಬೆಂಗಳೂರು-ಕಾರವಾರ ರೈಲು ಚಲಿಸುತ್ತಿದ್ದ ರೈಲಿನಲ್ಲಿದ್ದ ಕಾರವಾರದ ಮಹಿಳೆಯೋರ್ವರ 8 ಲಕ್ಷ ರು. ಮೌಲ್ಯದ ಚಿನ್ನಾಭರಣ ಮತ್ತು ನಗದು ಇದ್ದ ವ್ಯಾನಿಟಿ ಬ್ಯಾಗ್‌ನ್ನು ದರೋಡೆ ಮಾಡಿ ಪರಾರಿಯಾದ ಘಟನೆ ನಡೆದಿದೆ. ಬೆಂಗಳೂರಿನಿಂದ ಕಾರವಾರಕ್ಕೆ ಬರುತ್ತಿದ್ದ ರೈಲಿನಲ್ಲಿ ಮಹಿಳೆ ತನ್ನ ಪತಿಯೊಂದಿಗೆ ಪ್ರಯಾಣಿಸುತ್ತಿದ್ದಾಗ ರಾತ್ರಿ ವೇಳೆ ಪುತ್ತೂರು ರೈಲು ನಿಲ್ದಾಣಕ್ಕೆ ಸಮೀಪದ 1 ಕಿ.ಮಿ ದೂರ ಹಾರಾಡಿ-ಸಿಟಿಗುಡ್ಡೆ ನಡುವಿನ ಸ್ಥಳದಲ್ಲಿ ಆ.30 ರ ನಸುಕಿನ ಜಾವದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಕಾರವಾರ ಮೂಲದ ಬೆಂಗಳೂರಿನಲ್ಲಿ ವಾಸವಾಗಿರುವ ಅಧ್ಯಾಪಕ ರಮೇಶ ಮತ್ತು ಅವರ ಪತ್ನಿಯೇ 40 ಸಾವಿರ ರು. ನಗದು ಹಾಗೂ 8 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಇದ್ದ ವ್ಯಾನಿಟಿ ಬ್ಯಾಗ್ ಕಳೆದುಕೊಂಡವರು. ಆ.29 ರಾತ್ರಿ ಬೆಂಗಳೂರಿನಿಂದ ಕಾರವಾರಕ್ಕೆ ತೆರಳುತ್ತಿದ್ದ ರೈಲು ಕಬಕ ಪುತ್ತೂರು ನಿಲ್ದಾಣಕ್ಕೆ ರಾತ್ರಿ 2.20 ಕ್ಕೆ ತಲುಪಿತ್ತು. 2.30 ಕ್ಕೆ ಅಲ್ಲಿಂದ ಕಾರವಾರಕ್ಕೆ ಹೊರಟ ವೇಳೆ ರೈಲು ಪುತ್ತೂರು ಹಾರಾಡಿ ಸೇತುವೆ ದಾಟಿ ಮುಂದೆ ಸಿಟಿಗುಡ್ಡೆ ತಲುಪುತ್ತಿದ್ದಂತೆ ನಿರ್ಮಲಾ ತಮ್ಮ ತಲೆಯ ಅಡಿಯಲ್ಲಿ ಇಟ್ಟುಕೊಂಡಿದ್ದ ವ್ಯಾನಿಟಿ ಬ್ಯಾಗ್‌ನ್ನು ಎಳೆಯಲು ಯತ್ನಿಸಿದ್ದಾನೆ, ಇದು ಗಮನಕ್ಕೆ ಬಂದೊಡನೆ ಆ ವ್ಯಕ್ತಿಯನ್ನು ಮಹಿಳೆ ತಳ್ಳಿದ್ದಾರೆ.
ಈ ವೇಳೆ ಅವರ ಬಳಿ ಇದ್ದ ವ್ಯಾನಿಟಿ ಬ್ಯಾಗ್ ತುಂಡಾಗಿ ಚಿನ್ನಾಭರಣವಿದ್ದ ಬ್ಯಾಗು ಕಳ್ಳನ ಕೈ ಸೇರಿತ್ತು. ಆಗ ಆತ ರೈಲಿನಿಂದ ಹಾರಲು ಯತ್ನಿಸಿದಾಗ ಮಹಿಳೆ ಆತನನ್ನು ಹಿಡಿದು ರೈಲಿನ ಚೈನು ಎಳೆಯಲು ಪ್ರಯತ್ನಿಸಿದ್ದಾರೆ. ಆಗ ಆಕೆಯೂ ಆಯ ತಪ್ಪಿ ಬಿದ್ದಿದ್ದಾರೆ. ತಕ್ಷಣವೇ ಆರೋಪಿ ರೈಲಿನಿಂದ ಹಾರಿ ಪರಾರಿಯಾಗಿದ್ದಾನೆ. ಮಹಿಳೆಯೂ ರೈಲಿನ ಹಳಿಯ ಮೇಲೆ ಬಿದ್ದು ಗಾಯಗೊಂಡಿದ್ದಾರೆಂದು ಹೇಳಲಾಗಿದೆ.