ಕಾರವಾರ: ತಾಲೂಕಿನ ಸುಂಕೇರಿ ಕಠಿಣಕೋಣದ ನಿವಾಸಿಯೋರ್ವನು ಹಬ್ಬದ ದಿನವೇ ಸಾರಾಯಿ ಕುಡಿಯುವ ವಿಷಯದಲ್ಲಿ ಮನೆಯವರೊಂದಿಗೆ ಜಗಳ ಮಾಡಿಕೊಂಡು ನಂತರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಗಣೇಶ ಮೇಸ್ತಾ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ. ಮರವೊಂದರ ಟೊಂಗೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಈತನ ಮೃತದೇಹ ಪತ್ತೆಯಾಗಿದೆ. ಗುರುವಾರ ಸಂಜೆ ಕಾರವಾರ ತಾಲ್ಲೂಕಿನ ಶಿರವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಾಂಬಾ ಅರಣ್ಯ ವ್ಯಾಪ್ತಿಯ ನಾರಗೇರಿ ಬಳಿ ರಸ್ತೆಯ ಪಕ್ಕ ಈತನ ಸ್ಕೂಟರ್ ಪತ್ತೆಯಾಗಿದೆ.
ಬುಧವಾರ ಬೆಳಿಗ್ಗೆ ಈತ ಸಾರಾಯಿ ಕುಡಿಯುವ ವಿಷಯಕ್ಕೆ ಸಂಬಂಧಿಸಿದಂತೆ ಮನೆಯವರೊಂದಿಗೆ ಜಗಳ ಮಾಡಿಕೊಂಡು ಬಳಿಕ ಗಣಪತಿ ಹಬ್ಬವನ್ನು ನೀವೇ ಮಾಡಿಕೊಳ್ಳಿ, ನಾನು ಮನೆಯಲ್ಲಿ ಇರುವುದಿಲ್ಲ ಎಂದು ಹೇಳಿ ತನ್ನ ಸ್ಕೂಟರ್ ನಲ್ಲಿ ಹೊರ ಹೋಗಿದ್ದಾನೆ ಎನ್ನಲಾಗಿದೆ.
ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮೃತನ ಸಹೋದರ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.