ಗೋಕರ್ಣ: ದಾನ ನಮ್ಮ ಬದುಕಿಗೆ ಅಂತರಂಗ ವೈಭವವನ್ನು ತಂದುಕೊಡುತ್ತದೆ. ರಾಮನ ದಾನದ ಆದರ್ಶ ನಮಗೆ ಆದರ್ಶವಾಗದಿದ್ದರೆ, ನಮ್ಮ ಬದುಕು ವ್ಯರ್ಥ. ದಾನವಿಲ್ಲದೇ ಬದುಕು ಪೂರ್ಣವಲ್ಲ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು. ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಗುರುವಾರ ನಡದ ಹನ್ನೊಂದನೇ ದಾನ ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಮನುಷ್ಯನ ಬದುಕು ಪೂರ್ಣವಾಗುವುದು ದಾನದಲ್ಲಿ. ನಾವೆಲ್ಲರೂ ಮಾಧ್ಯಮ. ದಾನತತ್ವಕ್ಕೆ ನಮ್ಮ ಮೂಲಕ ಪೂಜೆ ಸಲ್ಲುತ್ತಿದೆ ಎಂದರು.
ನಮ್ಮ ನ್ಯಾಯಾರ್ಜಿತ ಸಂಪತ್ತು ಮಹಾನ್ ಕಾರ್ಯಕ್ಕೆ ಸಮರ್ಪಣೆಯಾದಾಗ ನಮ್ಮ ಬದುಕು ಸಾರ್ಥವಾಗುತ್ತದೆ. ಸತ್ಕಾರ್ಯಕ್ಕಾಗಿ ದಾನ ಮಾಡುವ ಮನಸ್ಸು ಹೊಂದಿರುವವರಿಗೆ ದೇವರು ಸಂಪತ್ತು ಕರುಣಿಸುತ್ತಾನೆ ಎಂದು ಹೇಳಿದರು.
ಮನುಷ್ಯ ಕೃತಘ್ನನಾಗಬಾರದು; ಕೃತಜ್ಞರಾಗಿರಬೇಕು ಎನ್ನುವುದು ರಾಮನ ವಾಣಿ. ಕೃತಘ್ನತೆ ಎನ್ನುವುದು ತ್ಯಾಜ್ಯ; ಕೃತಜ್ಞತೆ ಮಾತ್ರ ಪೂಜ್ಯ. ಕೃತಜ್ಞತೆಗೆ ಯಾವ ಪ್ರಾಯಶ್ಚಿತವೂ ಇಲ್ಲ ಎಂದು ಬಣ್ಣಿಸಿದರು.
ನಾವು ಏನಾದರೂ ಅದು ಸಮಾಜದಿಂದಾಗಿ. ನಮ್ಮ ಸಂಕಲ್ಪಕ್ಕೆ ಪ್ರೇರಣೆ ಕೂಡಾ ಸಮಾಜವೇ. ಎಲೆಮರೆಯ ಕಾಯಿಯಂತೆ ಸಮಾಜ, ಸಮಷ್ಠಿ ನಮ್ಮ ಸಾಧನೆಗೆ ಹಿನ್ನೆಲೆಯಾಗಿರುತ್ತದೆ. ಸಮಾಜದ ಸೇವೆಯನ್ನು ನೆನೆಸಿಕೊಳ್ಳುವುದು ನಮ್ಮ ಕರ್ತವ್ಯ. ದಾನಮಾನ ಎನ್ನುವುದು ಸಮಾಜದ ಪೂಜೆ. ಸಮಾಜ ಸಲ್ಲಿಸಿದ ಸೇವೆಯ ಸ್ಮರಣೆ ಎಂದು ವಿವರಿಸಿದರು.
ದಾನ ಎನ್ನುವುದು ಮಹಾಪುರುಷರು ಸಮಾಜಕ್ಕೆ ನೀಡಿದ ಆದರ್ಶ. ತನ್ನ ಕಣ್ಣನ್ನೇ ದಾನವಾಗಿ ನೀಡಿದ ರಾಜಾ ಅನರ್ಕ, ತನ್ನ ದೇಹದ ಮಾಂಸವನ್ನೇ ದಾನ ನೀಡಿದ ಶಿಬಿ ಚಕ್ರವರ್ತಿ, ರಾಮನಂಥ ದಾನ ಮೂರ್ತಿಗಳು ಹಲವು ಮಂದಿ ಪುರಾಣಗಳಲ್ಲಿ ಸಿಗುತ್ತಾರೆ. ರಾಮ ಕಾಡಿಗೆ ಹೋಗುವಾಗ ತನ್ನಲ್ಲಿ ಇದ್ದ ಎಲ್ಲ ಸಂಪತ್ತನ್ನು ದಾನ ಮಾಡುತ್ತಾನೆ. ತನ್ನ ಅಪಾರ ಸ್ವಂತ ಸಂಪತ್ತಿನ ಸರ್ವಸ್ವವನ್ನೂ ದಾನ ಮಾಡಿ ವನವಾಸಕ್ಕೆ ತೆರಳುತ್ತಾನೆ ಎಂದರು. ರಾಜ್ಯವನ್ನೇ ಕಳೆದುಕೊಂಡ ಸಂದರ್ಭದಲ್ಲೂ ತನ್ನಲ್ಲಿರುವ, ಸೀತೆಯಲ್ಲಿದ್ದ ಹಾಗೂ ಲಕ್ಷ್ಮಣನಲ್ಲಿ ಇದ್ದ ಎಲ್ಲ ಸಂಪತ್ತನ್ನು ದಾನ ಮಾಡುವ ಮನಸ್ಸು ರಾಮನಿಗೆ ಮಾತ್ರ ಬರಲು ಸಾಧ್ಯ ಎಂದರು.
ಹಿಂದೂ ಸೇವಾ ಪ್ರತಿಷ್ಠಾನದ ರಾಜ್ಯ ಸಂಚಾಲಕ ಸುಧಾಕರ್ ಜಿ ಅವರು ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿದ್ವಾನ್ ಗಣಪತಿ ಭಟ್, ಕೇಶವ ಹಗಡೆ ಕೊಳಗಿ, ಸರ್ವೇಶ್ವರ ಹೆಗಡೆ ಮುರೂರು ನೇತೃತ್ವದಲ್ಲಿ ಗಾನವೈಭವ ಕಾರ್ಯಕ್ರಮ ನಡೆಯಿತು.