ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಂಗ್ರಕೂಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನದಕ್ಕೆ ಆಗಮಿಸಿದ್ದು, ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ಅದಕ್ಕೂ ಮುನ್ನ, ಸಮಾವೇಶದ ವೇದಿಕೆ ಹಿಂಭಾಗ ಪ್ರಧಾನಿ ಮೋದಿ ಅವರನ್ನು ರಾಜ್ಯಪಾಲ ಗೆಹ್ಲೋಟ್, ನಳೀನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಸರ್ಬಾನಂದ ಸೋನವಾಲ್ ಸ್ವಾಗತಿಸಿದರು. ಇನ್ನು, ಹೆಲಿಪ್ಯಾಡ್ನಿಂದ ವೇದಿಕೆಗೆ ಬರುವಾಗ ಪ್ರಧಾನಿ ಜೊತೆ ಕಾರಿನಲ್ಲಿ ಸಿಎಂ ಬೊಮ್ಮಾಯಿ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವರು ಸಾಥ್ ನೀಡಿದರು.
ಮಂಗಳೂರಿನಲ್ಲಿ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ಮೋದಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನ ,ಮಾಡಲಾಯಿತು. ಶ್ರೀಕೃಷ್ಣನ ವಿಗ್ರಹ ನೀಡಿ ಕೇಂದ್ರ ಬಂದರು, ಹಡಗು, ಜಲಸಾರಿಗೆ ಸಚಿವ ಸರ್ಬಾನಂದ್ ಸೊನೊವಾಲ್ ಗೌರವಿಸಿದರು. ರಾಜ್ಯ ಸರ್ಕಾರದ ವತಿಯಿಂದ ಪ್ರಧಾನಿ ನರೇಂದ್ರ ಮೋದಿಗೆ ಮಲ್ಲಿಗೆ ಹಾರ ಹಾಕಿ, ಪರಶುರಾಮನ ವಿಗ್ರಹ ಉಡುಗೊರೆ ನೀಡಲಾಯಿತು. ಸಿಎಂ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ದಕ್ಷಿಣ ಕನ್ನಡ ಸಂಸದ ಕಟೀಲು, ಶಾಸಕ ಭರತ್ ಶೆಟ್ಟಿಯಿಂದ ಸನ್ಮಾನ ನೆರವೇರಿತು.
ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದ ವೇಳೆ ಒಟ್ಟು 3,800 ಕೋಟಿ ವೆಚ್ಚದ 8 ಯೋಜನೆಗಳಿಗೆ ಮೋದಿ ಚಾಲನೆ ನೀಡಿದರು. ಈ ವೇಳೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಭಾಷಣ ಸಾರಾಂಶ:
ಇಂದು ನೌಕಾ ಕ್ಷೇತ್ರದಲ್ಲಿ ದೇಶಕ್ಕೆ ಅದರಲ್ಲೂ ಕರ್ನಾಟಕದ ಕರಾವಳಿಗೆ ಮಹತ್ವದ ದಿನ. ಇಂದು ಹಲವು ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ್ದೇವೆ. ಕರ್ನಾಟಕದ ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಡಬಲ್ ಇಂಜಿನ್ ಸರ್ಕಾರ ಅಭಿವೃದ್ಧಿಯತ್ತ ಮುನ್ನಡೆ
ಮೇಕ್ ಇನ್ ಇಂಡಿಯಾದ ವಿಸ್ತರಣೆ ಬಹಳ ಪ್ರಾಮುಖ್ಯತೆ ಪಡೆದಿದೆ. 8 ವರ್ಷಗಳಿಂದ ಮೂಲ ಸೌಕರ್ಯ ಕ್ಷೇತ್ರದಲ್ಲಿ ಭಾರೀ ಬದಲಾವಣೆ ಕಂಡಿದೆ. ಸಾಗರ್ ಮಾಲಾ ಯೋಜನೆಯಿಂದ ಮತ್ತಷ್ಟು ಶಕ್ತಿ ಸಿಗುತ್ತಿದೆ. ಕರ್ನಾಟಕ ಸಾಗರ್ ಮಾಲಾ ಯೋಜನೆಯ ಫಲಾನುಭವಿಯಾಗಿದ್ದು, ಹಲವು ರಾಜ್ಯಗಳ ಪೈಕಿ ಕರ್ನಾಟಕ ಕೂಡ ಒಂದು. ಇಲ್ಲಿ ಒಂದು ಜಿಲ್ಲೆ, ಒಂದು ಉತ್ಪಾದನೆ ಮೂಲಕ ಅಭಿವೃದ್ಧಿ ಕಾಣಬಹುದಾಗಿದೆ.
ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ. ದೇಶದಲ್ಲಿ ಬಡವರಿಗಾಗಿ 3 ಕೋಟಿಗೂ ಹೆಚ್ಚು ಮನೆಗಳ ನಿರ್ಮಾಣವಾಗಿದೆ. ಕರ್ನಾಟಕದಲ್ಲೂ 8 ಲಕ್ಷಕ್ಕೂ ಹೆಚ್ಚು ಮನೆಗಳ ನಿರ್ಮಾಣವಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಿಂದ ಬಡವರಿಗೆ ಅನುಕೂಲವಾಗಿದೆ. ಸುಮಾರು 4 ಕೋಟಿ ಬಡವರಿಗೆ ಉಚಿತ ಚಿಕಿತ್ಸೆ ದೊರೆತಿದೆ. ಕರ್ನಾಟಕದಲ್ಲೂ 30 ಲಕ್ಷಕ್ಕೂ ಹೆಚ್ಚು ಬಡವರಿಗೆ ಉಚಿತ ಚಿಕಿತ್ಸೆ ಲಭ್ಯವಾಗಿದೆ. ಮುದ್ರಾ ಯೋಜನೆ ಮೂಲಕ ಸಣ್ಣ ಉದ್ದಿಮೆದಾರರಿಗೆ ಸಾಲ ಪ್ರಾಪ್ತಿಯಾಗುತ್ತಿದೆ. 20 ಲಕ್ಷಕ್ಕೂ ಹೆಚ್ಚು ಉದ್ಯಮಿಗಳಿಗೆ ಲೋನ್ ನೀಡಲಾಗಿದೆ.
ಉಡಾನ್ ಯೋಜನೆ ಅನೇಕರಿಗೆ ಬಹಳ ಅನುಕೂಲ ಕಲ್ಪಸಿದೆ. 1 ಕೋಟಿಗೂ ಹೆಚ್ಚು ಜನರು ವಿಮಾನ ಪ್ರಯಾಣ ಮಾಡಿದ್ದಾರೆ. ಕರ್ನಾಟಕದ ಡಬಲ್ ಇಂಜಿನ್ ಸರ್ಕಾರ ವೇಗ ಗತಿಯಲ್ಲಿ ಅಭಿವೃದ್ಧಿಯತ್ತ ಸಾಗಿದೆ. ರಾಜ್ಯದ ಜನರ ಬೇಡಿಕೆಗೆ ಪೂರಕವಾಗಿ ಅಭಿವೃದ್ಧಿ ಆಗುತ್ತಿದೆ. ಮೆಟ್ರೋ ಸಂಪರ್ಕದ ನಗರಗಳನ್ನು 4 ಪಟ್ಟು ಹೆಚ್ಚಳವಾಗಿದೆ. ಮೀನುಗಾರರ ಅಭಿವೃದ್ಧಿಗೆ ಡಬಲ್ ಇಂಜಿನ್ ಸರ್ಕಾರ ಪ್ರಯತ್ನಪಟ್ಟಿದೆ. ‘ಕ್ರೂಸ್ ಟೂರಿಸಂ’ಗೆ ನವಮಂಗಳೂರು ಬಂದರು ಸೂಕ್ತವಾಗಿದೆ.
ಕೊರೊನಾ ಕಾಲದಲ್ಲೂ ಭಾರತದ ನಡೆ ಕುರಿತು ಭಾರಿ ಪ್ರಶಂಸೆ ವ್ಯಕ್ತವಾಯ್ತು. ಜಾಗತಿಕ ಮಟ್ಟದಲ್ಲೂ ಭಾರತದ ಆರ್ಥಿಕ ದಾಖಲೆ ಐತಿಹಾಸಿಕವಾಗಿದೆ. ರಫ್ತು ಕ್ಷೇತ್ರದಲ್ಲಿ ಕೊರೊನಾ ಕಾಲದಲ್ಲೂ ಭಾರತದ ದಾಖಲೆ ದಾಖಲಾರ್ಯವಾಗಿದೆ! ಕರಾವಳಿ ಪ್ರದೇಶಗಳ ಆಮೂಲಾಗ್ರ ಪುನಶ್ಚೇತನಕ್ಕೆ ನಾವು ಬದ್ಧವಾಗಿದ್ದೇವೆ.
ರಾಣಿ ಅಬ್ಬಕ್ಕದೇವಿ ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ ಕರಾವಳಿ ಕ್ಷೇತ್ರಕ್ಕೆ ಬಂದು ಪ್ರೇರಣೆಗೊಳ್ಳುತ್ತೇನೆ. ಭಾರತ್ ಮಾತಾ ಕಿ ಜೈ ಎಂದರು.