ಭಟ್ಕಳ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಸ್ತಾವನೆಯಂತೆ ಕರ್ನಾಟಕ ಕಾನೂನು ಆಯೋಗವು ಈಗಾಗಲೇ ಸರಕಾರಕ್ಕೆ ಸಲ್ಲಿಸಿರುವ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨’ ನ್ನು ಮುಂಬರುವ ಅಧಿವೇಶನದಲ್ಲಿ ಸರ್ವಾನುಮತದ ಸಮ್ಮತಿ ಸೂಚಿಸಿ ಅಂಗೀಕಾರ ಮಾಡುವಂತೆ ಒತ್ತಾಯಿಸಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆಯವರು ಭಟ್ಕಳ ಶಾಸಕ ಸುನೀಲ ನಾಯ್ಕರವರಿಗೆ ಪ್ರಸ್ತಾವಿತ ವಿಧೇಯಕದ ಕರಡು ಪ್ರತಿಯ ಜೊತೆಗೆ ಮನವಿ ನೀಡಿ ಒತ್ತಾಯಿಸಿದರು.

ರಾಜ್ಯದಲ್ಲಿ ಅಧಿಕೃತ ಭಾಷೆಯ ವಿಚಾರವಾಗಿ ಕಾನೂನು ಚೌಕಟ್ಟಿನೊಳಗೆ ಒಂದು ವಿಧೇಯಕ ಜಾರಿ ಮಾಡುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨’ ನ್ನು ಸಿದ್ದಪಡಿಸಿ ಕರ್ನಾಟಕ ಕಾನೂನು ಆಯೋಗಕ್ಕೆ ಸಲ್ಲಿಸಿದ್ದು, ಕಾನೂನು ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಎಸ್.ಆರ್. ಬನ್ನೂರಮಠ ನೇತೃತ್ವದ ಸಮಿತಿಯು ಈ ವಿಧೇಯಕಕ್ಕೆ ಅವಶ್ಯವಿರುವ ಕಾನೂನುಗಳೊಂದಿಗೆ ಸಿದ್ದಪಡಿಸಿ ವಿಧೇಯಕದ ಕರಡನ್ನು ಕಾನೂನು ಸಚಿವರಿಗೆ ಸಲ್ಲಿಸಿದ್ದಾರೆ. ಅದನ್ನು ಮುಂಬರುವ ಅಧಿವೇಶನದಲ್ಲಿ ಮಂಡಿಸಿದ ಸಂದರ್ಭದಲ್ಲಿ , ಸದನದ ಸದಸ್ಯರೆಲ್ಲರೂ ಸರ್ವಾನುಮತದಿಂದ ಸಮ್ಮತಿಸಿ, ವಿಧೇಯಕವನ್ನು ಜಾರಿಗೆ ತರುವಂತೆ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದಾದ್ಯಂತ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ಭೇಟಿಯಾಗಿ ಒತ್ತಾಯಿಸುತ್ತಿದೆ. ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಷಿಯವರ ಸಲಹೆಯಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಸಹ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯ ಶಾಸಕರು, ಹಾಗೂ ವಿಧಾನ ಪರಿಷತ್ತನ್ನು ಖುದ್ದಾಗಿ ಭೇಟಿಯಾಗಿ ಈ ವಿಧೇಯಕ ಅಂಗೀಕಾರಕ್ಕೆ ಒತ್ತಾಯಿಸುತ್ತಿದೆ. ಭಾಷಾ ವಿಚಾರದಲ್ಲಿ ಇಲ್ಲಿಯವರೆಗೆ ಇದ್ದ ಕಾನೂನುಗಳಲ್ಲಿ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಸ್ಪಷ್ಠತೆಯಿರಲಿಲ್ಲ. ಆದರೆ ಈ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨’ ರಲ್ಲಿ ಕನ್ನಡ ಭಾಷೆಯ ವಿಚಾರದಲ್ಲಿ ನಿಯಮ ಉಲ್ಲಂಘಿಸಿದವರ ಮೇಲೆ ಯಾವ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಉಲ್ಲೇಖವಿದೆ. ಹಾಗೂ ಸರಕಾರದ ಮತ್ತು ಸ್ಥಳೀಯ ಸಂಸ್ಥೆಗಳ ಹಾಗೂ ಅನುದಾನಿತ ಮತ್ತು ಸರಕಾರದ ಅನುದಾನ ಪಡೆದ ಸಂಸ್ಥೆಗಳ ನಾಮಫಲಕ, ಹಾಗೂ ರಸ್ತೆ ನಾಮ ಫಲಕಗಳಲ್ಲಿ ಕನ್ನಡ ಕಡ್ಡಾಯ ಬಳಕೆಯ ಬಗ್ಗೆ ತಿಳಿಸಲಾಗಿದೆ. ಸಂಪರ್ಕ ಭಾಷೆಯಾಗಿ ಇಂಗ್ಲೀಷ್ ಬಳಸ ಬಹುದೆಂದೂ ಹೇಳಲಾಗಿದೆ. ಅದರೆ ಮತ್ತೆ ಬೇರೆ ಭಾಷೆ ಬಳಕೆಯಿಲ್ಲ ಎಂಬುದನ್ನು ಸ್ಪಷ್ಟ ಪಡಿಸಲಾಗಿದೆ. ಶಾಲಾ, ಕಾಲೇಜು, ವಿಶ್ವ ವಿದ್ಯಾಲಯ ಹಾಗೂ ಸರಕಾರದ ಸದನ, ಅಧಿವೇಶನ, ನ್ಯಾಯಾಲಯಗಳಲ್ಲಿಯೂ ಕನ್ನಡ ಬಳಕೆಯ ಬಗ್ಗೆ ಸ್ಪಷ್ಟ ಉಲ್ಲೇಖ ಮಾಡಲಾಗಿದೆ. ಈ ವಿಧೇಯಕ ಜಾರಿಯಾಗದರೆ ಭಾಷಾ ಸಮನ್ವಯತೆಗೆ ಸಹಕಾರಿಯಾಗಲಿದೆ. ಹಾಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಈ ವಿಧೇಯಕವನ್ನು ಬೆಂಬಲಿಸುತ್ತಿದೆ. ಜೊತೆಗೆ ಅಧಿವೇಶನದಲ್ಲಿ ಅಂಗೀಕರಿಸುವಂತೆ ಒತ್ತಾಯಿಸುತ್ತಿದೆ ಎಂದು ತಿಳಿಸಿದ ಬಿ.ಎನ್. ವಾಸರೆಯವರು ತಾವೂ ಕೂಡಾ ಸದನದಲ್ಲಿ ಈ ವಿಧೇಯಕ ಅಂಗೀಕಾರಕ್ಕೆ ಸಹಮತ ವ್ಯಕ್ತಪಡಿಸುವಂತೆ ಶಾಸಕ ಸುನೀಲ ನಾಯ್ಕರಲ್ಲಿ ಮನವಿ ಮಾಡಿದರು.

RELATED ARTICLES  ಕುಮಟಾದ ಹೆಗಡೆಯಲ್ಲಿ ಚತುರ್ವೇದ ಪಾರಾಯಣ ಮಹಾಸತ್ರಕ್ಕೆ ಚಾಲನೆ

ಮನವಿ ಸ್ವೀಕರಿಸಿ ಸಹಮತ ವ್ಯಕ್ತ ಪಡಿಸಿದ ಶಾಸಕ ಸುನೀಲ ನಾಯ್ಕರು ಈ ವಿಧೇಯಕದ ಕರಡು ಪ್ರತಿಯನ್ನು ಪರಶೀಲಿಸಿ ಸದನದಲ್ಲಿ ಬೆಂಬಲಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ, ಕಸಾಪ ಭಟ್ಕಳ ಘಟಕದ ಅಧ್ಯಕ್ಷ ಗಂಗಾಧರ ನಾಯ್ಕ ಉಪಸ್ಥಿತರಿದ್ದರು.

RELATED ARTICLES  ಸರ್ಕಾರಿ ನೌಕರರು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದ ಸಂಜೀವಕುಮಾರ.