ಬೆಳಗಾವಿ: ಚಿತ್ರದುರ್ಗದ ಮುರುಘಾಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧಿಸಿದಂತೆ ಇದೀಗ ಹೊಸ ತಿರುವು ಸಿಕ್ಕಿದೆ. ಮುರುಘಾ ಶರಣರನ್ನು ಮತ್ತೆ 9 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶಿಸಿದೆ. ಈ ಎಲ್ಲದರ ನಡುವೆ ಇದೀಗ ಬಸವ ತತ್ವ ಪ್ರತಿಪಾದಕ, ಅನುಯಾಯಿ ನೇಗಿನಹಾಳ ಶ್ರೀ ಗುರು ಮಡಿವಾಳೇಶ್ವರ ಮಠದ ಬಸವ ಸಿದ್ದಲಿಂಗ ಸ್ವಾಮೀಜಿ ನೇಣಿಗೆ ಶರಣಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಶ್ರೀಗುರು ಮಡಿವಾಳೇಶ್ವರ ಮಠದ ಬಸವಸಿದ್ಧಲಿಂಗ ಸ್ವಾಮೀಜಿ ಅವರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುರುಘಾ ಶರಣರ ಮೇಲಿನ ಪೋಕ್ಸೋ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಇಬ್ಬರು ಮಹಿಳೆಯರು ಮಾತನಾಡಿದ್ದರೆ ಎನ್ನಲಾದ ಆಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

RELATED ARTICLES  ಸಿಬಿಎಸ್‌ಇ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ : ಮೂವರ ಬಂಧನ.

ಮಹಿಳೆಯರು ನೇಗಿನಹಾಳ ಸ್ವಾಮೀಜಿ ಹೆಸರನ್ನು ಸಹ ಉಲ್ಲೇಖಿಸಿ ಹೆಣ್ಣು ಮಕ್ಕಳೊಂದಿಗೆ ಅನೈತಿಕ ಸಂಪರ್ಕ ಹೊಂದಿದ್ದಾರೆಂದು ಮಾತನಾಡಿದ್ದರು ಎಂದು ಹೇಳಲಾಗಿದೆ. ಇದರಿಂದ ಸ್ವಾಮೀಜಿ ಆಘಾತಗೊಂಡಿದ್ದರು ಎನ್ನಲಾಗಿದೆ. ಈ ಬಗ್ಗೆ ನಿನ್ನೆ ತಡ ರಾತ್ರಿವರೆಗೆ ಭಕ್ತರೊಂದಿಗೆ ಸಮಾಲೋಚನೆ ನಡೆಸಿದ ಸ್ವಾಮೀಜಿ, ನೀವೆಲ್ಲರೂ ನಮ್ಮನ್ನು ಸಂಶಯದಿಂದ ನೋಡುವಂತಾಗಿದೆ ಈ ಘಟನೆಯಿಂದ ಬದುಕಿರಬಾರದು ಎಂದೆನಿಸಿದೆ ಎಂದು ಹೇಳಿದ್ದರು ಎನ್ನಲಾಗಿದೆ.

RELATED ARTICLES  ಮೂರು ಮುತ್ತು ಖ್ಯಾತಿಯ ಕಲಾವಿದ ಅಶೋಕ್‌ ಶಾನಭಾಗ ಇನ್ನಿಲ್ಲ

ಈ ಹಿನ್ನೆಲೆಯಲ್ಲಿ ಮನನೊಂದ ನೇಗಿನಹಾಳ ಸ್ವಾಮೀಜಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸ್ವಾಮೀಜಿ ಆತ್ಮಹತ್ಯೆ ಸುದ್ದಿ ತಿಳಿದ ಕೂಡಲೇ ನೂರಾರು ಭಕ್ತರು ಮಠಕ್ಕೆ ದೌಡಾಯಿಸಿದ್ದಾರೆ. ಸಿಪಿಐ ಉಳವಪ್ಪ ಸಾತೇನಹಳ್ಳಿ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಇನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಆಡಿಯೋದ ಕುರಿತು ಮಠದ ಆಡಳಿತ ಮಂಡಳಿ ಪೊಲೀಸರಗೆ ದೂರು ನೀಡಿದೆ. ಇಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದೂರು ನೀಡಲಾಗಿದೆ.

Source : Vijaya karnataka