ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರ ಜೊಯಿಡಾ ಭಾಗದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ, ವಿದ್ಯಾ ದಾನ ಮಾಡಿದ್ದ ಮಾಜಿ ಸಚಿವ ಪ್ರಭಾಕರ್ ರಾಣೆ ಅವರು ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ. ತಿಂಗಳ ಹಿಂದೆ ಜ್ವರದಿಂದ ಬಳಲಿತ್ತಿದ್ದ ಅವರು, ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಪಡೆದುಕೊಂಡಿದ್ದರು. ನಂತರ ಕೊಂಚ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ ಅಗಿದ್ದರು, ಆದ್ರೆ,.ಇಂದು ಅವರ ನಿವಾಸದಲ್ಲೇ ಕೊನೆಯುಸಿರೆಳೆದಿದ್ದಾರೆ.
ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಗೆ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇರ್ಪಡೆಗೊಂಡು ಸೇವೆ ಸಲ್ಲಿಸಿದ್ದ ಅವರು, ಶಿಕ್ಷಕರನ್ನು ಸಂಘಟಿಸಿದ್ದರು. ಬಳಿಕ ಅದೇ ಸಂಸ್ಥೆಗೆ ಅಧ್ಯಕ್ಷರಾಗಿದ್ದರು. ನಂತರದಲ್ಲಿ ಬಾಪೂಜಿ ಗ್ರಾಮೀಣ ವಿಕಾಸ ಸಂಸ್ಥೆ ಅಡಿ ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಪಿಯು ಕಾಲೇಜು ಆರಂಭಿಸಿ, ವಿವಿಧೆಡೆ ಶಿಕ್ಷಣ ಕ್ಷೇತ್ರಕ್ಕೆ ತಮ್ಮದೆಯಾದ ಕೊಡುಗೆ ನೀಡಿದ್ದರು.
ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದರು. 1983 ರಿಂದ ಮೂರು ಅವಧಿಗೆ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿದ್ದರು. 1993 ರಲ್ಲಿ ವೀರಪ್ಪ ಮೊಯ್ಲಿ ಸಚಿವ ಸಂಪುಟದಲ್ಲಿ ವಯಸ್ಕರ ಶಿಕ್ಷಣ ಮತ್ತು ಸಾಕ್ಷರತೆ ಶಿಕ್ಷಣ ಖಾತೆ ಪಡೆದು 10 ತಿಂಗಳು ಸಚಿವರಾಗಿದ್ದರು. ಬಂಗಾರಪ್ಪ ಅವರ ಕ್ಲಾಸಿಕ್ ಕಂಪ್ಯೂಟರ್ ಹಗರಣವನ್ನು ಸದನದಲ್ಲಿ ಪ್ರಶ್ನಿಸಿ ,ಬಂಗಾರಪ್ಪ ಅಧಿಕಾರ ಕಳೆದುಕೊಳ್ಳಲು ಕಾರಣರಾಗಿದ್ದರು.
ಕಾರವಾರ- ಜೊಯಿಡಾ ಶಾಸಕರಾಗಿ ಮೂರು ಅವಧಿ ಪೂರೈಸಿದ್ದ ಅವರು 1996 ರಲ್ಲಿ ಸೋಲು ಅನುಭವಿಸಿದ್ದರು. ನಂತರ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕ ವಸಂತ ಅಸ್ನೋಟಿಕರ್ ವಿರುದ್ಧ ಸೋಲು ಕಂಡಿದ್ದರು. ಬಳಿಕ ಜೆಡಿಎಸ್‌ನಿಂದಲೂ ಸ್ಪರ್ಧಿಸಿ ಮತ್ತೆ ಪರಾಭವಗೊಂಡಿದ್ದರು. ತದನಂತರ ಅವರು ರಾಜಕೀಯದಿಂದ ದೂರು ಉಳಿದಿದ್ದರು.
Source : Suvarna news