ಕಾರವಾರ: ಸ್ವಚ್ಚತೆಯಲ್ಲಿ ಕಳೆದ ಸುಮಾರು ಮೂರು ವರ್ಷಗಳಿಂದ ಕಾರವಾರ ನಗರದಲ್ಲಿ ಸತತವಾಗಿ ಸೇವೆ ಮಾಡುವ ಮೂಲಕ ಮನೆಮಾತಾಗಿರುವ ಪಹರೆ ವೇದಿಕೆಗೆ ಪ್ರತಿಷ್ಠಿತ ರಾಜ್ಯಮಟ್ಟದ ಮುರುಘಾ ದಸರಾ ಪ್ರಶಸ್ತಿ ಲಭಿಸಿದೆ.
ಚಿತ್ರದುರ್ಗದ ಮುರುಘಾ ಮಠದ ವತಿಯಿಂದ ಪ್ರತಿವರ್ಷ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಇಂತಹ ಸಂಸ್ಥೆ ಮತ್ತು ಜನರಿಗೆ ದಸರಾ ಸಂಧರ್ಭದಲ್ಲಿ ವಿಶೇಷ ಪ್ರಶಸ್ತಿ ಮತ್ತು ಸನ್ಮಾನವನ್ನ ಮಾಡುತ್ತಾ ಬಂದಿದ್ದು ಈ ಬಾರಿ ಅಕ್ಟೋಬರ್ ೨ ರ ಗಾಂಧಿ ಜಯಂತಿಯಂದು ಪಹರೆ ವೇದಿಕೆಗೆ ಮಠದ ಅನುಭವ ಮಂಠಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುರುಘಾ ದಸರಾ ಪ್ರಶಸ್ತಿ ನೀಡಲಿದೆ.
ಪಹರೆ ವೇದಿಕೆ ಕಾರವಾರ ನಗರದ ಹಲವೆಡೆ ಸಮಾನ ಮನಸ್ಕರ ತಂಡವೊಂದನ್ನ ಕಟ್ಟಿಕೊಂಡು ಸ್ವಚ್ಚತಾ ಕಾರ್ಯವನ್ನ ಮಾಡುತ್ತಾ ಬಂದಿದ್ದು ನಗರದ ಪಾರ್ಕ್ ಗಳು, ಸರ್ಕಾರಿ ಕಚೇರಿ, ದೇವಸ್ಥಾನಗಳು, ರಸ್ತೆಗಳು ಸೇರಿದಂತೆ ನಾನಾ ಕಡೆ ಸ್ವಚ್ಚತೆಯನ್ನ ಮಾಡುವುದರ ಜೊತೆಗೆ ಜನರಲ್ಲಿ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನ ಮಾಡುತ್ತಾ ಬಂದಿದೆ.
ಪಹರೆ ವೇದಿಕೆಯಲ್ಲಿ ಸಮಾಜ ಸೇವಕರು, ವಿವಿಧ ಸಂಘ ಸಂಸ್ಥೆ ಮುಖಂಡರು, ನಾನಾ ರಾಜಕೀಯ ಪಕ್ಷದ ಮುಖಂಡರು, ಕಾರ್ಯಕರ್ತರು, ಸರ್ಕಾರಿ ಹಾಗೂ ಖಾಸಗಿ ನೌಕರರು, ವ್ಯಾಪಾರಸ್ಥರು ಹೀಗೆ ಎಲ್ಲಾ ವರ್ಗದವರು ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡು ಕಾರವಾರ ನಗರದಲ್ಲಿ ಸ್ವಚ್ಚತೆ ಪ್ರಜ್ಞೆ ತಂದಿರುವುದು ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.
ಪಹರೆ ಸಂಘಟನೆಯ ಉತ್ತಮ ಕಾರ್ಯಚಟುವಟಿಕೆಯನ್ನ ಗಮನಿಸಿ ಮುರುಘಾ ಮಠ ಈ ಬಾರಿ ಮುರುಘಾ ದಸರಾ ಪ್ರಶಸ್ತಿ ನೀಡಿರುವುದು ಜಿಲ್ಲೆಯ ಜನರಿಗೆ ಹೆಮ್ಮೆಯನ್ನ ಮೂಡಿಸಿದೆ.