ಭಟ್ಕಳ: ಶಾಂತಿ- ಸೌಹಾರ್ದತೆ ಮತ್ತು ಆರೋಗ್ಯ ಕಾಳಜಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕೇರಳದ ಕ್ಯಾಲಿಕಟ್ ನ ಫಯಿಜ್ ಅಶ್ರಫ್ ಎನ್ನುವವರು, ಸೈಕಲ್ ನಲ್ಲಿ ದೇಶದಿಂದ ದೇಶಕ್ಕೆ ಪ್ರಯಾಣಿಸ ಹೊರಟಿದ್ದಾರೆ. ಇವರು ಇದೀಗ ಉತ್ತರಕನ್ನಡ ಪ್ರವೇಶಿಸಿದ್ದು, ಭಟ್ಕಳದಲ್ಲಿ ಇವರನ್ನು ಸ್ವಾಗತಿಸಲಾಗಿದೆ.
ಇವರು ಆ.15 ಕ್ಕೆ ಕೇರಳದ ತಿರುವನಂತಪುರಂನಿಂದ ಸೈಕ್ಲಿಂಗ್ ಆರಂಭಿಸಿರುವ ಇವರು, 35 ದೇಶಗಳನ್ನ ದಾಟಿ, 35,000 ಕಿ.ಮೀ. ಕ್ರಮಿಸಿ 450 ದಿನಗಳಲ್ಲಿ ಲಂಡನ್ ತಲುಪುವ ವಿಶ್ವಾಸ ಹೊಂದಿದ್ದಾರೆ.
ಸದ್ಯ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಿಂದ ಮುಂದೆ ಸಾಗಿರುವ ಫಯಿಜ್, 30 ದಿನಗಳಲ್ಲಿ ಭಾರತವನ್ನ ಸುತ್ತಿ, ಬಳಿಕ ಪಾಕಿಸ್ತಾನ, ಮಸ್ಕತ್, ಓಮನ್, ಯುಎಇ, ಸೌದಿ ಅರೇಬಿಯಾ, ಕ್ವಾಟರ್, ಬಹ್ರೈನ್, ಕುವೈತ್, ಇರಾಕ್, ಇರಾನ್, ಅಜರ್ ಬೈಜಾನ್, ಜಾರ್ಜಿಯಾ ಹಾಗೂ ಟರ್ಕಿ ದೇಶಗಳ ಮೂಲಕ ಲಂಡನ್ ತಲುಪಲಿದ್ದಾರೆ.
ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಇವರು ಈ ಹಿಂದೆ ಕೂಡ 2019 ರಲ್ಲಿ ಸೈಕಲ್ ನಲ್ಲೇ ಸಿಂಗಾಪುರ ಪ್ರವಾಸ ಕೈಗೊಂಡಿದ್ದರು. ಇವರ ಸಾಹಸಕ್ಕೆ ಯಶ ಸಿಗಲೆಂದು ಜನರು ಹಾರೈಸುತ್ತಿದ್ದಾರೆ.