ಕಾರವಾರ: ಗೋವಾ ಮದ್ಯ ಹಾಗೂ ಫೆನ್ನಿಯನ್ನು
ಅಕ್ರಮವಾಗಿ ಸಾಗಿಸುತ್ತಿದ್ದ ಗೂಡ್ಸ್ ಕ್ಯಾರಿಯರ್ ಜಪ್ತಿಪಡಿಸಿ, ಚಾಲಕನ ಸಮೇತ ತಾಲೂಕಿನ ಮಾಜಾಳಿ ತನಿಖಾ ಠಾಣೆಯ ಹತ್ತಿರ ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ ಆದೇಶ ಹಾಗೂ ಜಿಲ್ಲಾ ಅಬಕಾರಿ ಉಪ ಆಯುಕ್ತರ ನಿರ್ದೇಶನ ಹಾಗೂ ಮಾರ್ಗದರ್ಶನದ ಮೇರೆಗೆ ತಾಲೂಕಿನ
ಮಾಜಾಳಿ ಅಬಕಾರಿ ತನಿಖಾ ಠಾಣೆಯಲ್ಲಿ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ತಂಡ, ಉಪವಿಭಾಗದ ನಿರೀಕ್ಷಕರು, ಕಾರವಾರ ವಲಯ ಹಾಗೂ ಅಬಕಾರಿ ತನಿಖಾ ಠಾಣೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಂಟಿಯಾಗಿ ತಪಾಸಣೆ ಕೈಗೊಂಡಿದ್ದರು ಎನ್ನಲಾಗಿದೆ.
ಈ ಸಮಯದಲ್ಲಿ ಗೂಡ್ಸ್ ಕ್ಯಾರಿಯರ್ ನ್ನು ತಡೆದು ಪರಿಶೀಲನೆ ನಡೆಸಿದಾಗ ಸುಮಾರು 474 ಲೀ.ಗೋವಾ ಮದ್ಯ ಹಾಗೂ 18 ಲೀ. ಗೋವಾ ಫೆನ್ನಿಯನ್ನು ಸ್ಕ್ಯಾಪ್ ಖಾಲಿ ಬಾಟಲಿಗಳೊಂದಿಗೆ ಅಕ್ರಮವಾಗಿ ಸಾಗಾಟ ಮಾಡುತ್ತಿರವುದು ಬೆಳಕಿಗೆ ಬಂದಿದೆ. ಈ ಮದ್ಯಗಳ ಅಂದಾಜು ಮೌಲ್ಯ 6.34 ಲಕ್ಷ,ಗೋವಾ ಫೆನ್ನಿ ಅಂದಾಜು ಮೌಲ್ಯ 7, 200 ಹಾಗೂ ವಾಹನದ ಮೌಲ್ಯ 10 ಲಕ್ಷ, ಸ್ಕಾಪ್ ಬಾಟಲಿಗಳ ಮೌಲ್ಯ 44 ಸಾವಿರ, ಒಟ್ಟು ಅಂದಾಜು ಮೌಲ್ಯ 16.86 ಲಕ್ಷವಾಗಿದೆ ಎಂದು ತಿಳಿದುಬಂದಿದೆ.
ಈ ಗೂಡ್ಸ್ ಕ್ಯಾರಿಯರ್ ಚಾಲಕ, ತೆಲಂಗಾಣ ರಾಜ್ಯದ ಬನುಪಟಿ ಜಗನ್ ಮೋಹನ್ ಎಂಬುವವನ್ನು ದಸ್ತಗಿರಿ ಮಾಡಲಾಗಿದ್ದು, ವಾಹನದ ಮಾಲೀಕನ ಪತ್ತೆ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಅಬಕಾರಿ ನಿರೀಕ್ಷಕ ಬಸವರಾಜ, ಉಪ ನಿರೀಕ್ಷಕ ಎಂ. ಎಂ.ನಾಯ್ಕ, ಸಿಬ್ಬಂದಿ
ಎನ್ ಜಿ ಜೋಗಳೇಕರ ಸುರೇಶ ಹಾರೂಗೊಪ್ಪ, ರಂಜನಾ ನಾಯ್ಕ, ನಾಗರಾಜ ಹಾಗೂ ಎನ್. ಎನ್.ಖಾನ್ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.