ಕಾರವಾರ: ರಾಷ್ಟ್ರೀಯ ಹೆದ್ದಾರಿ 66 ರ ಗೋವಾ ರಾಜ್ಯದ ಕಾಣಕೋಣದ ಮನೋಹರ ಪರಿಕ್ಕರ್ ಬೈಪಾಸ್ ಬಳಿ ಭೀಕರ ಅಪಘಾತ ಸಂಭವಿಸಿ ಮೂವರು ಮೃತಪಟ್ಟು ನಾಲ್ವರು ಗಂಭೀರ ಗಾಯಗೊಂಡ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಈ ಘಟನೆ ಇಂದು ಸಂಜೆ ಸಂಭವಿಸಿದೆ‌ ಎನ್ನಲಾಗಿದೆ.

ಅಪಘಾತದಲ್ಲಿ ಕಾರವಾರದಿಂದ ಮಡಗಾಂವ ತೆರಳುತ್ತಿದ್ದ ಕಾರಿನಲ್ಲಿದ್ದ ಓರ್ವ ಮಹಿಳೆ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಇನ್ನೋರ್ವ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಇನ್ನು ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಸ್ಕೂಟರ್ ಸವಾರ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.

RELATED ARTICLES  ಕಾರವಾರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಉಸ್ತುವಾರಿ ಸಚಿವ ಹೆಬ್ಬಾರ್

ಮಡಗಾಂವ ನಿಂದ ಕಾರವಾರದತ್ತ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತ್ಯಂತ ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಜಂಪ್ ಆದ ಪರಿಣಾಮ ಬಲಭಾಗದ ರಸ್ತೆಗೆ ನುಗ್ಗಿದೆ. ಇದೇ ಸಂದರ್ಭದಲ್ಲಿ ಕಾರವಾರ ಹಣಕೋಣದ ಸಾತೇರಿ ದೇವಸ್ಥಾನಕ್ಕೆ ಬಂದು ಮಡಗಾಂವ್ ಗೆ ವಾಪಸ್ಸಾಗುತ್ತಿದ್ದ ಕಾರಿಗೆ ಜೋರಾಗಿ ಗುದ್ದಿ ಬಳಿಕ ಅದೇ ಮಾರ್ಗದಲ್ಲಿ ಚಲಿಸುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ.

RELATED ARTICLES  ಮುಂದುವರಿದ ಶೋಧ ಕಾರ್ಯ

ಅಪಘಾತದ ತೀವ್ರತೆಗೆ ಎರಡೂ ಕಾರುಗಳು ನಜ್ಜುಗಜ್ಜಾಗಿವೆ. ಸ್ಥಳಕ್ಕೆ ಕಾಣಕೋಣ ಪೊಲೀಸರು ಧಾವಿಸಿದ್ದು ಪಂಚನಾಮೆ ಕಾರ್ಯದಲ್ಲಿ ತೊಡಗಿದ್ದಾರೆ. ಗಾಯಗೊಂಡವರನ್ನು ಕಾಣಕೋಣ ಆಸ್ಪತ್ರೆಗೆ ಸಾಗಿಸಲಾಗಿದೆ.